ಹೆಚ್ಚಿನ ಪ್ರಮಾಣದ ನೀರನ್ನು ಬಿಟ್ಟಿರುವ ಹಿನ್ನೆಲೆ-ತಮಿಳುನಾಡಿಗೆ ಬಿಡಬೇಕಾದ ಪ್ರಮಾಣದಷ್ಟು ನೀರು ಹರಿದುಹೋಗಲಿದೆ

ಬೆಂಗಳೂರು, ಆ.12- ಕಾವೇರಿ ಜಲಾನಯನ ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಜಲಾಶಯಗಳಿಂದ ಎರಡು ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ಪ್ರಮಾಣದ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಈ ವರ್ಷ ಬಿಡಬೇಕಾದ ಪ್ರಮಾಣದಷ್ಟು ನೀರು ಹರಿದುಹೋಗಲಿದೆ.

ಈಗಾಗಲೇ ರಾಜ್ಯದಿಂದ ತಮಿಳುನಾಡಿಗೆ 32 ಟಿಎಂಸಿ ಅಡಿಗೂ ಹೆಚ್ಚು ನೀರು ಬಿಡಲಾಗಿದ್ದು, ಪ್ರತಿ ದಿನ 17 ಟಿಎಂಸಿ ಅಡಿಗೂ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಸುಮಾರು 100 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಿಂದ ತಮಿಳುನಾಡಿಗೆ ಜೂನ್‍ನಲ್ಲಿ 9.2 ಟಿಎಂಸಿ, ಜುಲೈನಲ್ಲಿ 32 ಟಿಎಂಸಿ ಹಾಗೂ ಆಗಸ್ಟ್‍ನಲ್ಲಿ 46 ಟಿಎಂಸಿ ನೀರನ್ನು ಬಿಡಬೇಕಾಗಿದೆ. ಕಾವೇರಿ, ಕಪಿಲಾ ಹಾಗೂ ಹೇಮಾವತಿ ನದಿಯಲ್ಲಿ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಬಿಡಲಾಗಿದೆ. ಹೀಗಾಗಿ ಈ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಿಂದ ಬಿಡಬೇಕಾಗಿದ್ದ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿದು ಹೋಗಲಿದೆ ಎಂದು ಅಂದಾಜಿಸಲಾಗಿದೆ.

ಕಳೆದೊಂದು ವಾರದಿಂದ ಬಿದ್ದ ಭಾರೀ ಮಳೆಯಿಂದಾಗಿ ಕಾವೇರಿ ಜಲಾನಯ ಭಾಗದ ಹಾರಂಗಿ, ಕಬಿನಿ, ಹೇಮಾವತಿ ಹಾಗೂ ಕೆಆರ್‍ಎಸ್ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಿರುವದುರಿಂದ ಅಷ್ಟೇ ಪ್ರಮಾಣದಲ್ಲಿ ಹೊರ ಹರಿವನ್ನೂ ಕೂಡ ಹೆಚ್ಚಿಸಲಾಗಿದೆ. ಹೀಗಾಗಿ ತಮಿಳುನಾಡು ಹಾಗೂ ನಮ್ಮ ರಾಜ್ಯದ ನಡುವಿನ ನೀರಿನ ಸಂಘರ್ಷಕ್ಕೆ ತೆರೆಬಿದ್ದಂತಾಗಿದೆ.

ಕಳೆದ ವರ್ಷವೂ ಕಾವೇರಿ ಜಲಾನಯನ ಭಾಗದಲ್ಲಿ ಅತಿವೃಷ್ಟಿ ಉಂಟಾಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗಿತ್ತು.

ಕಳೆದ ವರ್ಷ ಒಟ್ಟಾರೆ 375 ಟಿಎಂಸಿ ಅಡಿಯಷ್ಟು ನೀರನ್ನು ಬಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ