
ನವದೆಹಲಿ: ಕಣಿವೆ ರಾಜ್ಯದ ಅತಿದೊಡ್ಡ ಹಬ್ಬವಾಗಿರುವ ಈದ್ ಸಂಭ್ರಮದ ಪ್ರಯುಕ್ತ ರಾಜ್ಯದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ತೆರವುಗೊಳಿಸಲಾಗಿದೆ.
ಶ್ರೀನಗರದಲ್ಲಿ 370 ರದ್ದು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲಾಗಿದ್ದ ಕರ್ಫ್ಯೂವನ್ನು ಆ ಭಾಗದಲ್ಲಿ ಮರುಹೇರಿಕೆ ಮಾಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದು ಮಾಡಿದ್ದ ಬಳಿಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮುಂಜಾಗೃತಾ ಕ್ರಮವಾಗಿ, ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೇನೆ ಹಾಗೂ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಶ್ರೀನಗರದಲ್ಲಿ ಪ್ರತಿಭಟನೆ ಆರಂಭಿಸಿದ ಸ್ಥಳೀಯರು, ನಮಗೆ ಸ್ವಾತಂತ್ರ್ಯ ಬೇಕು. 370 ರದ್ದತಿಗೆ ನಮ್ಮ ಅನುಮತಿ ಇಲ್ಲ ಎಂಬ ಘೋಷಣೆವುಳ್ಳ ಬ್ಯಾನರ್ಗಳನ್ನು ಹಿಡಿದು, ಸರ್ಕಾರ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು, ಶೆಲ್ಗಳನ್ನು ಸಿಡಿಸಿದ್ದಾರೆ. ಉಳಿದಂತೆ ಶ್ರೀನಗರದ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂವಹನ ಸಂಪರ್ಕಗಳನ್ನು ನಿರ್ಬಂಧಿಸಿರುವ ಬಗ್ಗೆ ಅಧಿಕಾರಿಯನ್ನು ಕೇಳಿದಾಗ, ಅವರು ಶಾಂತಿ ಕಾಪಾಡಿಕೊಳ್ಳಲು ಹಾಗೂ ತಪ್ಪು ಮಾಹಿತಿ ಮತ್ತು ವದಂತಿ ಹಬ್ಬುವುದನ್ನು ತಡೆಯಲು ತೆಗೆದುಕೊಂಡ ತಾತ್ಕಾಲಿಕ ಕ್ರಮಗಳು ಎಂದು ಹೇಳಿದರು. “ಸರ್ಕಾರವು ಇಲ್ಲಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಹೊಂದಿದೆ. ಪ್ರತಿದಿನ ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಫೋನ್‌ಗಳ ಮೇಲಿನ ನಿರ್ಬಂಧಗಳನ್ನು ಆದಷ್ಟು ಬೇಗ ತೆಗೆದುಹಾಕುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಕಾಶ್ಮೀರದ ಪ್ರತಿ ಹಳ್ಳಿಯಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶದ ಹಳ್ಳಿಗಳ ಪ್ರತಿ ಮನೆಗೊಬ್ಬರಂತೆ ಸಿಬ್ಬಂದಿಯನ್ನು ಕಾವಲಿಗೆ ಇರಿಸಲಾಗಿದೆ.