ಮತ್ತೆ ವಿವಾದ ಸೃಷ್ಟಿಸಿದ ಜೊಮ್ಯಾಟೋ; ಧರ್ಮದ ವಿಚಾರಕ್ಕೆ ಡೆಲಿವರಿ ಬಾಯ್​ಗಳಿಂದಲೇ ಪ್ರತಿಭಟನೆ!

ಕೋಲ್ಕತ್ತಾ : ಹೋಟೆಲ್​ಗಳಿಂದ ಗ್ರಾಹಕರ ಮನೆಗೆ ಆಹಾರ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೋ ಸಂಸ್ಥೆ ಇತ್ತೀಚೆಗೆ ಧರ್ಮದ ವಿಚಾರಕ್ಕೆ ವಿವಾದ ಸೃಷ್ಟಿಸಿತ್ತು. ನಂತರ ಸಂಸ್ಥೆ ‘ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ’ ಎಂದು ಟ್ವೀಟ್​ ಮಾಡಿತ್ತು. ಆದರೆ, ಈಗ ಮತ್ತದೇ ವಿಚಾರಕ್ಕೆ ಜೊಮ್ಯಾಟೋ ಸುದ್ದಿಯಾಗಿದೆ. ಅಚ್ಚರಿ ಎಂದರೆ ಈ ಬಾರಿ ಸಂಸ್ಥೆಯ ಡಿಲಿವರಿ ಬಾಯ್​ಗಳೇ ಪ್ರತಿಭಟನೆಗೆ ಇಳಿದಿದ್ದಾರೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಗೋಮಾಂಸ ಮತ್ತು ಹಂದಿ ಮಾಂಸದಿಂದ ಸಿದ್ಧವಾದ ಆಹಾರವನ್ನು ಡೆಲಿವರಿ ಮಾಡುವಂತೆ ಒತ್ತಾಯ ಹೇರಲಾಗುತ್ತಿದೆಯಂತೆ.

ಇದು ಡೆಲಿವರಿ ಬಾಯ್​ಗಳ ಕೋಪಕ್ಕೆ ಕಾರಣವಾಗಿದೆ. ಇದು ನಮ್ಮ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂಥದ್ದು ಎಂದು ಅಲ್ಲಿನ ಕೆಲಸಗಾರರು ಹೇಳಿಕೊಂಡಿದ್ದಾರೆ.

ಅಲ್ಲದೆ, ಈ ಸಮಸ್ಯೆ ಬಗ್ಗೆ ಸಂಸ್ಥೆ ಚಿಂತೆಯನ್ನೇ ಮಾಡುತ್ತಿಲ್ಲ ಎಂದು ಹೇಳಿದೆ. ಹೀಗಾಗಿ ನಿನ್ನೆ ಇದನ್ನು ಖಂಡಿಸಿ ಘೋಷಣೆ ಕೂಗಿದ್ದ ಜೊಮ್ಯಾಟೋ ಸಿಬ್ಬಂದಿ ಇಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

“ನಮ್ಮ ಭಾವನೆಗಳ ಜೊತೆ ಜೊಮ್ಯಾಟೋ ಆಟವಾಡುತ್ತಿದೆ. ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗ್ರಾಹಕರು ಏನನ್ನು ಕೇಳುತ್ತಾರೋ ಅದನ್ನು ತಲುಪಿಸಿ ಎಂದು ನಮಗೆ ಸಂಸ್ಥೆ ಹೇಳಿದೆ. ಆದರೆ, ನಾವು ಹಿಂದುಗಳು. ನಮಗೆ ಗೋಮಾಂಸದ ಆಹಾರಗಳನ್ನು ಡೆಲಿವರಿ ಮಾಡಲು ಸೂಚಿಸುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಮುಸ್ಲಿಂ ಗೆಳೆಯರಿಗೆ ಹಂದಿ ಮಾಂಸದ ಆಹಾರಗಳನ್ನು ನೀಡಬಹುದು. ಇದನ್ನು ನಾವು ಒಪ್ಪುವುದಿಲ್ಲ,” ಎಂದು ಪ್ರತಿಭಟನಾಕಾರರು ಹೇಳೀದ್ದಾರೆ.

ಈ ವಿಚಾರ ಸರ್ಕಾದ ಗಮನಕ್ಕೆ ಬಂದಿದ್ದು, “ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಯಾವುದೇ ಸಂಸ್ಥೆಯೂ ಅಡ್ಡಿ ಮಾಡಬಾರದು,” ಎಂದು ಹೇಳಿದೆ.

ಮೊದಲಿನ ವಿವಾದವೇನು?:
ಜೊಮ್ಯಾಟೋ ಡೆಲಿವರಿ ಬಾಯ್ ಫಯಾಜ್  ಜಬಾಲ್ಪುರ್​ದಲ್ಲಿರುವ ಗ್ರಾಹಕನ ಮನೆಗೆ ಊಟ ತೆಗೆದುಕೊಂಡು ಹೋಗಿದ್ದ. ಆತ ಮುಸ್ಲಿಂ ಎಂಬ ಕಾರಣಕ್ಕೆ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಅಮಿತ್ ಶುಕ್ಲಾ ಜೊಮಾಟೋ ಸಿಬ್ಬಂದಿಗೆ ಕೇಳಿದ್ದ. ಹಾಗೇ, ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ದ. ‘ಮುಸ್ಲಿಂ ತಂದುಕೊಟ್ಟ ಊಟವನ್ನು ನಾನು ತಿನ್ನುವುದಿಲ್ಲ ಎಂದು ಹೇಳಿದರೂ ಡೆಲಿವರಿ ಬಾಯ್​ನನ್ನು ಜೊಮಾಟೋ ಬದಲಾಯಿಸುತ್ತಿಲ್ಲ. ಆಯಾ ಧರ್ಮದ ಗ್ರಾಹಕರಿಗೆ ಸರಿಹೊಂದುವ ಡೆಲಿವರಿ ಬಾಯ್​ನನ್ನು ಕಳುಹಿಸುವಷ್ಟು ಸಾಮಾನ್ಯ ಜ್ಞಾನವೂ ಜೊಮಾಟೋಗಿಲ್ಲ’ ಎಂದು ಟ್ವೀಟ್​ ಮಾಡಿದ್ದ.

ಅದಕ್ಕೆ ಮರುಟ್ವೀಟ್ ಮಾಡಿದ್ದ ಜೊಮಾಟೋ, ‘ಆಹಾರಕ್ಕೆ ಯಾವುದೇ ಧರ್ಮವಿಲ್ಲ, ಆಹಾರವೇ ಒಂದು ಧರ್ಮ’ ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್​ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಊಬರ್ ಈಟ್ ಕೂಡ ಜೊಮಾಟೋಗೆ ಟ್ಯಾಗ್ ಮಾಡಿ ‘ನಾವು ನಿಮ್ಮಂದಿಗಿದ್ದೇವೆ’ ಎಂದು ಟ್ವೀಟ್ ಮಾಡುವ ಮೂಲಕ ನೈತಿಕ ಬೆಂಬಲ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ #ಐಡೋಂಟ್​ಸ್ಟಾಂಡ್​ವಿತ್​ಅಮಿತ್​ (ಅಮಿತ್​ ಹೇಳಿಕೆಗೆ ನಮ್ಮ ಸಹಮತವಿಲ್ಲ) ಎಂಬ ಟ್ಯಾಗ್​ನೊಂದಿಗೆ ಹಲವರು ಟ್ವೀಟ್ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ