ಬೆಂಗಳೂರು, ಆ.12- ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಚಿಗಳ್ಳಿ ಡ್ಯಾಂ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಡ್ಯಾಂನ ಕೆಳಭಾಗದಲ್ಲಿದ್ದ ಹಳ್ಳಿಗಳಿಗೆ ನೀರು ನುಗ್ಗಿದೆ. ಈ ಕಿರು ಅಣೆಕಟ್ಟು ಇಂದು 12.30ರ ಸುಮಾರಿಗೆ ಒಡೆದು ಭಾರೀ ನೀರು ಹರಿದ ಪರಿಣಾಮ ಸಾವಿರಾರು ಎಕರೆಯಲ್ಲಿದ್ದ ಬೆಳೆ ನಾಶವಾಗಿದೆ.
ಸುಮಾರು 10 ಗ್ರಾಮಗಳು ಜಲಾವೃತಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿ ಹರೀಶ್ ಕುಮಾರ್ ಅವರು, ಇದು ಸಣ್ಣ ಡ್ಯಾಂ ಆಗಿದ್ದು ಒಡೆದು ಹೋಗಿರುವ ಪರಿಣಾಮ ಕೃಷಿ ಹಾನಿ ಮಾತ್ರ ಆಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.
ಇದು ಯಾವುದೇ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವಲ್ಲ. ಮಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸಿದ ಸಣ್ಣ ಅಣೆಕಟ್ಟು. ಇದರಿಂದ ಯಾವುದೇ ಅಂತಹ ಗಂಭೀರ ಹಾನಿಯಾಗುವುದಿಲ್ಲ. ಆದಾಗ್ಯೂ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.