ಶಾಸಕಿ ಅಂಜಲಿ ನಿಂಬಾಳ್ಕರ್‍ರವರ ಮನೆ ಜಲಾವೃತ-ನೀರನ್ನು ಹೊರಹಾಕಿ ಮನೆ ಶುದ್ಧೀಕರಣಗೊಳಿಸಲು ಅಧಿಕಾರಿಗಳ ದುರ್ಬಳಕೆ

ಬೆಂಗಳೂರು, ಆ.12- ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆ ಜಲಾವೃತವಾಗಿದೆ. ಹೀಗಾಗಿ ಆ ನೀರನ್ನು ಹೊರಹಾಕಿ ಮನೆ ಶುದ್ಧೀಕರಣಗೊಳಿಸಲು ಅವರು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಆಕ್ರೋಶವೂ ವ್ಯಕ್ತಗೊಂಡಿದೆ.

ಮಳೆ, ಪ್ರವಾಹದಿಂದ ಜಿಲ್ಲಾದ್ಯಂತ ಎಲ್ಲೆಲ್ಲೂ ನೀರು ನುಗ್ಗಿದೆ. ಹಾಗೆಯೇ, ಐದು ದಿನಗಳ ಹಿಂದೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆಯೊಳಗೂ ಪ್ರವಾಹದ ನೀರು ನುಗ್ಗಿ ಮನೆಯೆಲ್ಲ ರಾಡಿಯಾಗಿದೆ.

ಆದರೆ, ಈ ನೀರನ್ನು ಶುದ್ಧಗೊಳಿಸಲು ಅಂಜಲಿ ಅವರು ಪೌರ ಕಾರ್ಮಿಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಪಪಂ ಮುಖ್ಯಾಧಿಕಾರಿ ಮತ್ತು ಅಗ್ನಿಶಾಮಕ ಅಧಿಕಾರಿಗಳು, ಪೌರ ಕಾರ್ಮಿಕರು, ಪಪಂ ಆರೋಗ್ಯಾಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದಕ್ಕೆ ವಿರೋಧವೂ ವ್ಯಕ್ತಗೊಂಡಿದೆ.

ಇಡೀ ಜಿಲ್ಲೆಗೆ ಜಿಲ್ಲೆಯೇ ನೀರಿನಲ್ಲಿ ಮುಳುಗಿದೆ. ಜನರೂ ನೋವಿನಲ್ಲಿ ಮುಳುಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಾಸಕಿಯವರು ತಮ್ಮ ಬಗ್ಗೆಯಷ್ಟೇ ಯೋಚಿಸಿದ್ದಾರೆ. ಜಿಲ್ಲೆಯ ಜನರ ಕೆಲಸಕ್ಕೆ ಅಧಿಕಾರಿಗಳನ್ನು ಬಳಸಲು ಬಿಟ್ಟು ಸ್ವಂತ ಕೆಲಸಕ್ಕೆ ಬಳಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ