ಪ್ರವಾಹದ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ-ಮಾಜಿ ಸಿಎಂ ಕುಮಾರಸ್ವಾಮಿ

ಬೆಳಗಾವಿ,ಆ.10- ಪ್ರವಾಹದ ವಿಚಾರದಲ್ಲಿ ತಾವು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ನೆರೆಪೀಡಿತ ಪ್ರದೇಶಗಳಿಗೆ ಸೂಕ್ತ ನೆರವನ್ನು ನೀಡಬೇಕೆಂದು ಒತ್ತಾಯಿಸಿದರು.

ಪ್ರವಾಹ ಪೀಡಿತರಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ರಾಜ್ಯ ಸರ್ಕಾರದ ಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು, ಯಾವುದೇ ತಾರತಮ್ಯ ಮಾಡದೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಅನಾರೋಗ್ಯದಿಂದಾಗಿ ಮೂರು ದಿನದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸಬೇಕಿಲ್ಲ.

ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ನೆರವು ನೀಡುವಾಗ ಯಾವುದೇ ತಾರತಮ್ಯ ಮಾಡಬಾರದು. ನಿರಾಶ್ರಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ ಇದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸ್ಥಳೀಯ ಶಾಸಕರೇ ಮುತುವರ್ಜಿ ವಹಿಸಿ ಪರಿಹಾರ ಕಾರ್ಯದಲ್ಲಿ ತೊಡಗಬೇಕು ಎಂದರು.

10 ಸಾವಿರ ಬೆಡ್‍ಶೀಟ್:
ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವುದಾಗಿ ಹೇಳಿದ ಕುಮಾರಸ್ವಾಮಿ ಅವರು, ಸಂತ್ರಸ್ತರಿಗೆ 10 ಸಾವಿರ ಬೆಡ್‍ಶೀಟ್ ನೀಡಲಾಗುವುದು ಎಂದು ಹೇಳಿದರು.

ಸಂಕಷ್ಟದಲ್ಲಿರುವ ಜನರಿಗೆ ಕೈಲಾಗುವಷ್ಟು ಸಹಾಯ ಮಾಡಲಾಗುವುದು. ಜನರಿಗೆ ಮೊದಲು ಧೈರ್ಯ ತುಂಬುವ ಕೆಲಸವಾಗಬೇಕು. ಅದರ ಜೊತೆಗೆ ಅವರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದರು.

ಹೆಚ್‍ಡಿಕೆ ಭೇಟಿ:
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾವಿ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿದರು.

ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿಯವರು, ನನಗೆ ಅನಾರೋಗ್ಯವಿದ್ದರೂ ಪ್ರವಾಹದಿಂದ ನಲುಗುತ್ತಿರುವ ಪ್ರದೇಶಗಳ ಜನರನ್ನು ಕಂಡು ಮನಸ್ಸು ತುಡಿಯುತ್ತಿದೆ. ಹಾಗಾಗಿ ನೆರೆಸಂತ್ರಸ್ತರ ಪರಿಸ್ಥಿತಿಯನ್ನು ಆಲಿಸುವುದಾಗಿ ಹೇಳಿದ್ದರು.

ಅದೇ ರೀತಿ ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಇದಕ್ಕೂ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಂದ ಪ್ರವಾಹ ಹಾಗೂ ಸಂತ್ರಸ್ತರ ಪರಿಹಾರ ಕೇಂದ್ರಗಳ ಮಾಹಿತಿ ಪಡೆದುಕೊಂಡರು. ನಂತರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಸಂಕೇಶ್ವರದಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿ ನಂತರ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅಂಕಲಿ ಗ್ರಾಮದ ಪರಿಹಾರಕೇಂದ್ರಕ್ಕೆ ತೆರಳಿ ನೆರೆ ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿದರು.

ಕುಮಾರಸ್ವಾಮಿ ಅವರೊಂದಿಗೆ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ, ಸಾ.ರಾ.ಮಹೇಶ್ ಸಾಥ್ ನೀಡಿದ್ದರು.

ಮಧ್ಯಾಹ್ನದ ನಂತರ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆ ನರಗುಂದ ತಾಲೂಕಿನ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹ ಹಾಗೂ ಪರಿಹಾರಗಳ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ