ಬೆಂಗಳೂರು, ಆ.10- ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣವೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸದೆ ನೆರೆ ಪೀಡಿತರ ನೆರವಿಗೆ 5 ಸಾವಿರ ಕೋಟಿ ರೂ. ತಕ್ಷಣ ಬಿಡುಗಡೆ ಮಾಡಿ ಕರ್ತವ್ಯ ನಿಷ್ಠೆ ತೋರಬೇಕೆಂದು ಟ್ವೀಟ್ನಲ್ಲಿ ಆಗ್ರಹಿಸಲಾಗಿದೆ.
ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಒಲ್ಲದ ವ್ಯಕ್ತಿ ಆಗಿರಬಹುದು. ಆದರೆ, ನೆರವು ನೀಡುವುದರಲ್ಲಿ ಮಲತಾಯಿ ಧೋರಣೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳ ವರ್ಗಾವಣೆಗೆ ಕೊಟ್ಟ ಆದ್ಯತೆಯನ್ನು ಸಂಪುಟ ರಚನೆಗೆ ಕೊಟ್ಟಿದ್ದರೆ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ರಮಗಳು ಸಮರ್ಪಕವಾಗಿ ಆಗುತ್ತಿದ್ದವು ಎಂದು ಕಾಂಗ್ರೆಸ್ ಟೀಕಿಸಿದೆ.