ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಬೆಂಗಳೂರು,ಆ.10-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾವಿ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿದರು.

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸಿದರು.

ನಿನ್ನೆ ರಾತ್ರಿ ಟ್ವೀಟ್ ಮಾಡಿದ ಕುಮಾರಸ್ವಾಮಿಯವರು, ನನಗೆ ಅನಾರೋಗ್ಯವಿದ್ದರೂ ಪ್ರವಾಹದಿಂದ ನಲಗುತ್ತಿರುವ ರಾಜ್ಯದ ಜನರನ್ನು ಕಂಡು ಮನಸ್ಸು ತುಡಿಯುತ್ತಿದೆ. ಹಾಗಾಗಿ ನೆರೆಸಂತ್ರಸ್ತರ ಪರಿಸ್ಥಿತಿಯನ್ನು ಆಲಿಸುವುದಾಗಿ ಹೇಳಿದ್ದರು.

ಅದೇ ರೀತಿ ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಇದಕ್ಕೂ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಂದ ಪ್ರವಾಹ ಹಾಗೂ ಸಂತ್ರಸ್ತರ ಪರಿಹಾರ ಕೇಂದ್ರಗಳ ಮಾಹಿತಿ ಪಡೆದುಕೊಂಡರು. ನಂತರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಸಂಕೇಶ್ವರದಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿ ನಂತರ ಬಳಿಕ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅಂಕಲಿ ಗ್ರಾಮದ ಪರಿಹಾರಕೇಂದ್ರಕ್ಕೆ ತೆರಳಿ ನೆರೆ ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿದರು.

ಕುಮಾರಸ್ವಾಮಿ ಅವರೊಂದಿಗೆ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ, ಸಾ.ರಾ.ಮಹೇಶ್ ಸಾಥ್ ನೀಡಿದ್ದರು.

ಮಧ್ಯಾಹ್ನದ ನಂತರ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆ ನರಗುಂದ ತಾಲೂಕಿನ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹ ಹಾಗೂ ಪರಿಹಾರಗಳ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ