ಬೆಂಗಳೂರು,ಆ.10- ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 110 ಅಡಿಗೆ ತಲುಪಿದೆ. ಜಲಾಶಯಕ್ಕೆ 1.8 ಲಕ್ಷ ಕ್ಯೂಸೆಕ್ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದಿಂದ ನದಿಗೆ ಬಿಡಲಾಗುತ್ತಿದ್ದ ನೀರನ್ನು ನಿನ್ನೆಯಿಂದ ನಿಲ್ಲಿಸಿದ್ದು, ದಿನದಿಂದ ದಿನಕ್ಕೆ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಹೇಮಾವತಿ ಜಲಾಶಯದಿಂದ 79 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹಾಗೂ ಹಾರಂಗಿ ಜಲಾಶಯದಿಂದ 16 ಸಾವಿರಕ್ಕೂ ಹೆಚ್ಚು ನೀರನ್ನು ಬಿಡಲಾಗುತ್ತಿದೆ.
ಇದರಿಂದ ಕೆಆರ್ಎಸ್ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಗರಿಷ್ಠ 124.80 ಅಡಿ ಸಾಮಥ್ರ್ಯದ ಕೆಆರ್ಎಸ್ ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ತುಂಬುವ ಸಾಧ್ಯತೆಗಳಿವೆ.
ಈಗಾಗಲೇ ಕಬಿನಿ, ಹಾರಂಗಿ ಜಲಾಶಯಗಳು ಭರ್ತಿಯಾಗಿದ್ದು, ಹೇಮಾವತಿ ಜಲಾಶಯಕ್ಕೆ 1.30 ಲಕ್ಷ ಕ್ಯೂಸೆಕ್ನಷ್ಟು ನೀರು ಹರಿದುಬರುತ್ತಿರುವುದರಿಂದ ಬಹುತೇಕ ಭರ್ತಿಯಾದಂತಾಗಿದೆ. ಒಳಹರಿವು ಹೆಚ್ಚಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 79 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಬಿನಿ ಜಲಾಶಯ ಭರ್ತಿಯಾಗಿದ್ದು, ನಿನ್ನೆಯಿಂದಲೇ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇಂದು 1.25 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಜೊತೆಗೆ ತಾರಕ ಮತ್ತು ನಗು ಜಲಾಶಯಗಳಿಂದಲೂ 25 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟಿದ್ದು, ಕಪಿಲಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದೆ.
ರಾಜ್ಯದಿಂದ ಬಿಡುತ್ತಿರುವ ಭಾರೀ ಪ್ರಮಾಣದ ನೀರು ಕಾವೇರಿ ನದಿಯಲ್ಲಿ ಪ್ರವಾಹ ಉಂಟು ಮಾಡಿದ್ದು, ಮೆಟ್ಟೂರು ಜಲಾಶಯದ ಒಳಹರಿವಿನ ಪ್ರಮಾಣವು ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂದು ಬೆಳಗಿನ ಮಾಹಿತಿ ಪ್ರಕಾರ 35 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಮೆಟ್ಟೂರು ಜಲಾಶಯವನ್ನು ಸೇರುತ್ತಿದೆ.
ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಏರಿಕೆಯಾಗುತ್ತಿದೆ. ಹೀಗಾಗಿ ಈ ಬಾರಿ ತಮಿಳುನಾಡು ಹಾಗೂ ನಮ್ಮ ರಾಜ್ಯದ ನಡುವಿನ ನೀರಿನ ಸಂಘರ್ಷಕ್ಕೆ ತೆರೆ ಬೀಳುವ ಸಾಧ್ಯತೆಗಳಿವೆ.