ಬೆಂಗಳೂರು,ಆ.10- ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬೀಳುತ್ತಿರುವ ಕುಂಭದ್ರೋಣ ಮಳೆ ನಾಳೆಯಿಂದ ಇಳಿಮುಖವಾಗುವ ಸಾಧ್ಯತೆಗಳಿವೆ. ಇಂದು ಕೂಡ ಈ ಭಾಗದಲ್ಲಿ ಮಳೆ ಮುಂದುವರೆದಿದೆ.
ಹವಾ ಮುನ್ಸೂಚನೆ ಪ್ರಕಾರ ಆ. 11ರ ನಂತರ ಮಳೆ ಇಳಿಮುಖವಾಗುವ ಸಾಧ್ಯತೆಗಳಿವೆ. ಕಳೆದ ಒಂದುವಾರದಿಂದಲೂ ನಿರಂತರವಾಗಿ ಧಾರಾಕಾರ ಮಳೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೀಳುತ್ತಿರುವುದರಿಂದ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಹೈದ್ರಾಬಾದ್ ಕರ್ನಾಟಕ, ಬೆಂಗಳೂರು ಸೇರಿದಂತೆ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಮಳೆಯೇ ಇಲ್ಲದಂತಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆಯೇ ಹೊರತು. ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದೆ. ಆದರೆ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡುಗು ಜಿಲ್ಲೆಗಳಲ್ಲಿ ಅತೀಭಾರಿ ಮಳೆ ಬಿದ್ದಿದೆ.
ಮೈಸೂರು, ಬೆಳಗಾವಿ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾಗಶಃ ಭಾರೀ ಮಳೆಯಾಗಿದ್ದರೆ. ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ಕೆಲವೆಡೆ ಹೆಚ್ಚು ಮಳೆಯಾಗಿದ್ದರೆ. ಇನ್ನು ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ.
ರಾಜ್ಯ ಒಳನಾಡಿನಲ್ಲಿ ಮಳೆ ಇಳಿಮುಖವಾಗಲಿದೆ. ಕರಾವಳಿ ಮತ್ತು ಮಲೆನಾಡಿ ಭಾಗದಲ್ಲೂ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದರು.