ಬೆಂಗಳೂರು, ಆ.9-ನಾಡಿನೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಇಂದು ಮುಂಜಾನೆಯಿಂದಲೇ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು. ಅಲ್ಲದೆ, ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ದೃಶ್ಯಗಳು ಬೆಂಗಳೂರಿನಲ್ಲಿ ಕಂಡುಬಂತು. ಬೆಲೆ ಏರಿಕೆ ನಡುವೆಯೂ ಭಕ್ತರು ವರಮಹಾಲಕ್ಷ್ಮಿಯನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ, ಆಭರಣ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿ ಮುತ್ತೈದೆಯವರಿಗೆ ಅರಿಶಿನ-ಕುಂಕುಮ ಕೊಟ್ಟು ಆಶೀರ್ವಾದ ಪಡೆದರು.
ಬೆಳಗ್ಗೆ ನಗರ ಸೇರಿದಂತೆ ವಿವಿಧೆಡೆ ಮಳೆ ಪ್ರಾರಂಭವಾದ್ದರಿಂದ ಮಹಿಳೆಯರು ಹಬ್ಬಕ್ಕೆ ವರುಣ ಅಡ್ಡಿ ಮಾಡುತ್ತಾನೆಂದುಕೊಂಡು ಬೇಸರ ಪಟ್ಟುಕೊಂಡಿದ್ದರು. ಆದರೆ, 12 ಗಂಟೆ ನಂತರ ಮಳೆ ಬಿಡುವು ಕೊಟ್ಟಿದ್ದರಿಂದ ಸಂಭ್ರಮದ-ಸಡಗರದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು.
ಸಂಜೆ ಮನೆ ಮನೆಗೆ ಭೇಟಿ ಮಾಡಿ ಅರಿಶಿನ-ಕುಂಕುಮ ತೆಗೆದುಕೊಳ್ಳಲು ಮಹಿಳೆಯರು ಅಲಂಕಾರಗೊಂಡು ಉತ್ಸಾಹದಿಂದ ಹೊರಟರು.