ತಿರುವನಂತಪುರಂ/ ಮುಂಬೈ,ಆ.9- ಕೇರಳ ಮತ್ತು ಮಹಾರಾಷ್ಟ್ರದಲ್ಲಿ ನಿರಂತರ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ಈವರೆಗೆ 70ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಜಲಗಂಡಾಂತರದಿಂದ ಕೇರಳ ಮತ್ತು ಮಹಾರಾಷ್ಟ್ರ ಅಯೋಮಯವಾಗಿದ್ದು, ಜನಜೀವನ ಅಲ್ಲೋಲಕಲ್ಲೋಲವಾಗಿದೆ.
ಮುನ್ಸೂಚನೆಯಂತೆ ದೇವರ ನಾಡು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, 14 ಜಿಲ್ಲೆಗಳಲ್ಲಿ ರೆಡ್ಅಲರ್ಟ್ ಘೋಷಿಸಲಾಗಿದೆ.
ನಯನಮನೋಹರ ವಯನಾಡು, ಕೊಚ್ಚಿ, ಇಡುಕ್ಕಿ, ಅಳಪುಳ, ಕಲ್ಲಿಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಭೋರ್ಗರೆಯುತ್ತಿದ್ದು, ಸಾವು-ನೋವು ಸಂಭವಿಸುತ್ತಿವೆ.
ರಾಹುಲ್ಗಾಂಧಿ ಸಂಸದರಾಗಿರುವ ಪರ್ವತಮಯ ಪ್ರದೇಶ ವಯನಾಡಿನ ಮೇಪ್ಪಾಡಿಯಲ್ಲಿ ನಿನ್ನೆ ರಾತ್ರಿ ಗುಡ್ಡ ಕುಸಿದು 40ಕ್ಕೂ ಹೆಚ್ಚು ಮಂದಿ ಭೂ ಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಈವರೆಗೆ ಕೆಲವರನ್ನು ಮಾತ್ರ ಮಣ್ಣಿನ ಅವಶೇಷಗಳಿಂದ ರಕ್ಷಣೆ ಮಾಡಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿ ಹಾಗೂ ತೋಟದ ಕಾರ್ಮಿಕರು ವಾಸವಾಗಿದ್ದ ವಸತಿ ಪ್ರದೇಶಗಳ ಮೇಲೆ ಬೆಟ್ಟದ ಭಾಗವೊಂದು ಕುಸಿದು ಭೂ ಸಮಾಧಿಯಾಗಿದೆ.
ಈ ದುರ್ಘಟನೆಯಲ್ಲಿ ಅನೇಕರು ಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡು ಜೀವಂತ ಸಮಾಧಿಯಾದರು. ಸ್ಥಳೀಯರ ಪ್ರಕಾರ ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಯನಾಡು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮೇಪ್ಪಾಡಿಯ ಗುಡ್ಡಗಳು ನಿರಂತರ ಮಳೆಯಿಂದ ತೇವಗೊಂಡು ಭೂಮಿ ಮತ್ತು ಮಣ್ಣು ಸಡಿಲವಾಗಿ ಬೆಟ್ಟದ ಒಂದು ಪಾಶ್ರ್ವ ಕುಸಿದಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂ ಕುಸಿತದಿಂದ ಈ ಮಾರ್ಗದ ರಸ್ತೆಗಳು ಬಂದ್ ಆಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಭಾರೀ ಅಡ್ಡಿಯಾಗಿದೆ.
ಕೊಚ್ಚಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆ.11ರ ಭಾನುವಾರದವರೆಗೂ ಸ್ಥಗಿತಗೊಳಿಸಲಾಗಿದೆ.
ಕೇರಳದ ಒಟ್ಟು 44 ನದಿಗಳಲ್ಲಿ ಅರ್ಧದಷ್ಟು ನದಿಗಳು ಮತ್ತು ಉಪ ನದಿಗಳು ಅಪಾಯ ಮಟ್ಟ ಮೀರಿ ಭೋರ್ಗರೆಯುತ್ತಿದ್ದು, ನೆರೆ ಹಾವಳಿಗೆ ಕಾರಣವಾಗಿದೆ.
ಜಲಗಂಡಾಂತರದಿಂದ 14 ಜಿಲ್ಲೆಗಳ ನೂರಾರು ಗ್ರಾಮಗಳು ಭಾಗಶಃ ಜಲಾವೃತವಾಗಿದ್ದು, ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿದೆ. ನಡುಗಡ್ಡೆಯಂತಾಗಿ ಅಪಾಯದಲ್ಲಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದು, ಅವರಿಗೆ ಪರಿಹಾರ ಮತ್ತು ಆಶ್ರಯ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರವಾಹ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಹೆಲಿಕಾಪ್ಟರ್ಮತ್ತು ನೌಕೆಗಳ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ವಯನಾಡು ಸಂಸದ ರಾಹುಲ್ಗಾಂಧಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಗತ್ಯ ಪರಿಹಾರ ಕೈಗೊಳ್ಳುವಂತೆ ಕೋರಿದ್ದಾರೆ. ಅಲ್ಲದೆ, ವಯನಾಡು ಸೇರಿದಂತೆ ಪ್ರವಾಹ ಪೀಡಿತ ಕೇರಳಾಗೆ ಅಗತ್ಯ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಅಲ್ಲೋಲಕಲ್ಲೋಲ:
ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಭಾರೀ ಮತ್ತು ಪ್ರವಾಹದಿಂದ ಈವರೆಗೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅನೇಕರು ಕಣ್ಮರೆಯಾಗಿದ್ದಾರೆ.
ನೈಸರ್ಗಿಕ ವಿಕೋಪದಿಂದ ಕೆಲವರು ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಅಗತ್ಯವಿದೆ.
ಮುಂಬೈ, ಥಾಣೆ, ಪುಣೆ, ಪಾಲ್ಗರ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಲಪ್ರಯಳ ಸೃಷ್ಟಿಸಿದ್ದ ವರುಣನ ಆರ್ಭಟದಿಂದ ಈಗ ಕೊಲ್ಲಾಪುರ ಅಕ್ಷರಶಃ ಜಲಗಂಡಾಂತರಕ್ಕೆ ಸಿಲುಕಿದೆ.
ಕೊಲ್ಲಾಪುರದ ಕೆಲ ತಗ್ಗು ಪ್ರದೇಶಗಳಲ್ಲಿ ಫ್ಲೈಓವರ್ ಮಟ್ಟದವರೆಗೂ ನೀರು ನಿಂತಿದ್ದು, ಮೂರಂತಸ್ತಿನ ತಾರಸಿವರೆಗೂ ನೀರು ತುಂಬಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಮಟ್ಟ ಏರುತ್ತಿದ್ದಂತೆ ಕೊಲ್ಲಾಪುರದ ಅನೇಕ ಭಾಗಗಳಲ್ಲಿದ್ದ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಇನ್ನೂ ಎರಡು ದಿನಗಳ ಕಾಲ ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಲಗಂಡಾಂತರ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಗತ್ಯ ನೆರವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವು ಕೋರಿದ್ದಾರೆ.
ಸಾಂಗ್ಲಿ ಜಿಲ್ಲೆಯ ಬ್ರಹ್ಮನಾಲ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರ ರಕ್ಷಣೆಗೆ ದಾವಿಸಿ 35ಕ್ಕೂ ಹೆಚ್ಚು ಮಂದಿಯನ್ನು ಅಪಾಯದಿಂದ ಪಾರು ಮಾಡಿ ಹಿಂದಿರುಗುತ್ತಿದ್ದ ದೋಣಿಯೊಂದು ಮುಳುಗಿ ನಿನ್ನೆ 13 ಮಂದಿ ಜಲಸಮಾಧಿಯಾಗಿದ್ದರು.
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ವರುಣನ ರುದ್ರಾವತಾರದಿಂದ ಇನ್ನೂ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಚರಣೆ ಸಮರೋಪಾದಿಯಲ್ಲಿ ಸಾಗಿದೆ.