ನಾಳೆ ಕಾಂಗ್ರೆಸ್ ಕಾರ್ಯಕಾರಿಣಿಯ ಮಹತ್ವದ ಸಭೆ

ನವದೆಹಲಿ, ಆ.9- ರಾಜಧಾನಿ ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಕಾರ್ಯಕಾರಿಣಿ(ಸಿಡಬ್ಲೂಸಿ)ಯ ಮಹತ್ವದ ಸಭೆ ನಡೆಯಲಿದ್ದು, ತೆರವಾಗಿರುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಿಡಬ್ಲೂಸಿ ಸಭೆ ಕಳೆದ ವಾರವೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಂಸತ್ ಅಧಿವೇಶನ ನಡೆಯುತ್ತಿದ್ದ ಕಾರಣ ಆ. 10ರಂದು ಸಿಡಬ್ಲೂಸಿ ಸಭೆ ನಡೆಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದರು.

ಲೋಕಸಭೆ ಚುನಾವಣೆಯ ಸೋಲಿನ ನೈತಿಕ ಹೊಣೆಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿ. ತ್ಯಾಗಪತ್ರ ಹಿಂತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ನಾಯಕತ್ವ ಬಿಕ್ಕಟ್ಟು ಕೊನೆಗೊಳಿಸುವ ನಿಟ್ಟಿನಲ್ಲಿ ನಾಳೆ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಕೆಲವು ಹಿರಿಯನಾಯಕರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಆದರೂ ಪ್ರಸುತ್ತ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಅಧ್ಯಕ್ಷ ಪಟ್ಟ ನೀಡಬೇಕೆಂಬುದು ಶಶಿ ತರೂರ್ ಸೇರಿದಂತೆ ಅನೇಕ ಅಗ್ರ ಮುಖಂಡರ ಅಭಿಪ್ರಾಯವಾಗಿದೆ.

ಒಟ್ಟಾರೆ ನಾಳಿನ ಸಭೆ ಎಐಸಿಸಿ ನೂತನ ಅಧ್ಯಕ್ಷರ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ