ನಾವೆಲ್ಲರೂ ಒಟ್ಟಿಗೆ ಸೇರಿ ನೆರವು ನೀಡೋಣ-ನಟರಾದ ಸುದೀಪ್ ಮತ್ತು ದರ್ಶನ್

ಬೆಂಗಳೂರು, ಆ.8- ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ನಲುಗಿ ಹೋಗಿದ್ದು, ನಾವೆಲ್ಲರೂ ಒಟ್ಟಿಗೆ ಸೇರಿ ನೆರವು ನೀಡೋಣ ಎಂದು ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಪ್ರತ್ಯೇಕವಾಗಿ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ವರುಣನ ರೌದ್ರಾವತಾರದಿಂದ ಪ್ರವಾಹ ಉಂಟಾಗಿದ್ದು, ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿ ರಕ್ಷಣೆಗೆ ಮೊರೆ ಇಡುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ಕಿಚ್ಚ ಸುದೀಪ್ ಟ್ವೀಟ್‍ನಲ್ಲಿ ಕೋರಿದ್ದಾರೆ.

ಅಲ್ಲಿ ಉಂಟಾಗಿರುವ ಜಲಪ್ರಳಯದ ಪೋಟೊ ಮತ್ತು ವಿಡಿಯೋಗಳನ್ನು ನೋಡುತ್ತಿದ್ದೇವೆ. ನಮ್ಮ ಜನರು ಎಲ್ಲಿ ಹೋಗಿದ್ದಾರೆ. ಏನು ಮಾಡುತ್ತಿದ್ದಾರೆ.

ಯಾವ ಪರಿಸ್ಥಿತಿಯಲ್ಲಿದ್ದಾರೆ. ನಮಗೆ ಗೊತ್ತಾಗುತ್ತಿಲ್ಲ. ಜಲಕಂಟಕ ಎದುರಾದ ಪ್ರದೇಶಗಳ ಅಕ್ಕಪಕ್ಕದ ನನ್ನ ಅಭಿಮಾನಿ ಬಳಗದವರು ಅಲ್ಲಿಗೆ ಬೇಗ ತಲುಪಬಹುದು ಎನ್ನುವ ಕಾರಣಕ್ಕಾಗಿ ವಿನಂತಿಸುತ್ತಿದ್ದೇನೆ ಎಂದರು.

ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಅವರ ಕೆಲಸ ಅವರು ಮಾಡುತ್ತಿದ್ದಾರೆ. ಜಲಪ್ರ¼ಯದ ಸ್ಥಳಕ್ಕೆ ನನ್ನ ಅಭಿಮಾನಿಗಳು ತೆರಳಿ ಸಂತ್ರಸ್ಥರಿಗೆ ಏನು ಬೇಕು ಎಂಬುದನ್ನು ತಿಳಿದು ನನಗೆ ತಿಳಿಸಿ ನಮ್ಮ ಕೈಲಾದ ಸಹಾಯವನ್ನು ನಾವು ಮಾಡೋಣ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿ, ನಮ್ಮ ಉತ್ತರ ಕರ್ನಾಟಕದಲ್ಲಿ ಹಲವು ಹಳ್ಳಿಗಳೂ ಮಳೆಯ ಅಬ್ಬರಕ್ಕೆ ಮುಳುಗಿ ಹೋಗಿದ್ದು, ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಕೈಲಾದ ಅಳಿಲು ಸೇವೆ ಮಾಡಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದಿದ್ದಾರೆ.

ಅಲ್ಲಿನ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ, ಉತ್ತರಕನ್ನಡ, ಗದಗ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಕೆಲ ಗ್ರಾಮಗಳು ನೀರಿನಲ್ಲಿ ಮುಳಗಿ ಜಲಾವೃತವಾಗಿವೆ. ಅಲ್ಲಿನ ಜನರಿಗೆ ಅಗತ್ಯವಿರುವ ವಸತಿ, ಊಟ ಸೇರಿದಂತೆ ಮತ್ತಿತರರ ಮೂಲಭೂತ ಸೌಲಭ್ಯ ಕಲ್ಪಿಸಲು ಎಲ್ಲರೂ ಒಂದಾಗಿ ದುಡಿಯೋಣ ಎಂದು ಕರೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ