ಕಟ್ಟಾ ಸುಬ್ರಮಣ್ಯ ನಾಯ್ಡು ವರದಿಗೆ ಮತ್ತೆ ಬಂದ ಜೀವ

ಬೆಂಗಳೂರು,ಆ.9- ಕೃಷ್ಣಾ ನದಿಯಿಂದ ಲಭ್ಯವಾಗುವ ಹೆಚ್ಚುವರಿ ನೀರನ್ನು ಸದ್ಭಳಕೆ ಮಾಡಿಕೊಂಡರೆ ರಾಜಧಾನಿ ಬೆಂಗಳೂರು ಸೇರಿದಂತೆ ಹತ್ತು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂಬ ಶಿಫಾರಸು ಮಾಡಿ ಮೂಲೆ ಸೇರಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿ ಇದೀಗ ಸರ್ಕಾರದ ಮುನ್ನೆಲೆಗೆ ಬಂದಿದೆ.

ಕೃಷ್ಣಾ ನದಿ ಪಾತ್ರದಲ್ಲಿ ಪ್ರಚಂಡ ಪ್ರವಾಹ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ವರದಿಯನ್ನು ಗಂಭೀರವಾಗಿ ಪರಗಣಿಸಬೇಕು ಎಂಬ ಕೂಗು ಅಧಿಕಾರಿಗಳ ಮಟ್ಟದಲ್ಲಿ ಕಾಣಿಸಿಕೊಂಡಿದ್ದು ಪರಿಣಾಮವಾಗಿ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿಗೆ ಮತ್ತೆ ಜೀವ ಬಂದಿದೆ.

ಈ ಹಿಂದೆ ಯಡಿಯೂರಪ್ಪನವರೇ ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀರು ಕೊಡುವ ಮಹತ್ವಾಕಾಂಕ್ಷೆಯ ವರದಿಯೊಂದನ್ನು ಹಲ ತಜ್ಞರ ಜತೆ ಚರ್ಚಿಸಿ ಕಟ್ಟಾ ಸುಬ್ರಮಣ್ಯ ನಾಯ್ಡು ರೂಪಿಸಿದ್ದರು.

ಕೃಷ್ಣಾ ಮಾತ್ರವಲ್ಲದೆ, ಕಾವೇರಿ ನದಿ ಪಾತ್ರದಿಂದಲೂ ಹೆಚ್ಚುವರಿ ನೀರು ಲಭ್ಯವಾದ ಕಾಲಕ್ಕೆ ಅಗತ್ಯವಿರುವ ಕಡೆ ಹರಿಸಬೇಕು. ಇದಕ್ಕೆ ಅಗತ್ಯವಾಗುವ ಲೈನ್ ಹಾಗೂ ಸಬ್ ಲೈನ್‍ಗಳನ್ನು ನಿರ್ಮಿಸಬೇಕು ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ವರದಿ ಹೇಳಿತ್ತು.

ದಿನ ಕಳೆದಂತೆ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಗಲಿದ್ದು ಈ ಹಿನ್ನೆಲೆಯಲ್ಲಿ ಆಲಮಟ್ಟಿ ಹಾಗೂ ಕಾವೇರಿ ನದಿಯಲ್ಲಿ ಲಭ್ಯವಾಗುವ ಹೆಚ್ಚುವರಿ ನೀರನ್ನು ಒಳನಾಡಿಗೆ ಹರಿಸುವ ಬಗ್ಗೆ ಈ ವರದಿ ವಿವರವಾಗಿ ಹೇಳಿತ್ತು.

ಆಲಮಟ್ಟಿ ಆಣೆಕಟ್ಟೆಯಿಂದ ಹರಿಯುವ ನೀರು ಅಗತ್ಯಕ್ಕಿಂತ ಹೆಚ್ಚುವರಿಯಾಗಿ ನೆರೆ ರಾಜ್ಯಕ್ಕೆ ಹರಿದು ಹೋಗುತ್ತಿದ್ದು ಬಹುತೇಕ ಪ್ರತಿ ವರ್ಷವೂ ಈ ಪರಿಸ್ಥಿತಿ ಉದ್ಭವವಾಗುತ್ತಿದೆ. ಆದರೆ ನಾವು ಒಳನಾಡಿಗೆ ನೀರು ಹರಿಸುವ ಲೈನ್ ಹಾಗೂ ಸಬ್‍ಲೈನ್‍ಗಳನ್ನು ಹಾಕಿಕೊಂಡರೆ ಒಂದು ಸಲ ಹರಿಸುವ ನೀರು ಎರಡು ಅಥವಾ ಮೂರು ವರ್ಷಗಳ ಮಟ್ಟಿಗೆ ಕುಡಿಯುವ ನೀರಿನ ದಾಹವನ್ನು ಇಂಗಿಸುತ್ತದೆ.

ಈ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟೆಯಿಂದ ಹತ್ತು ಟಿಎಂಸಿ ನೀರು ತರಬೇಕು ಹಾಗೂ ಕಾವೇರಿ ನದಿ ಪಾತ್ರದಲ್ಲಿ ಸಂಕಷ್ಟದ ವರ್ಷಗಳನ್ನು ಹೊರತುಪಡಿಸಿ ಉಳಿದಂತೆ ಹೆಚ್ಚುವರಿ ನೀರು ಲಭ್ಯವಾಗುವ ಕಾಲದಲ್ಲಿ ಇನ್ನೂ ಹತ್ತು ಟಿಎಂಸಿಯಷ್ಟು ನೀರು ತರಬಹುದು.

ಈಗಾಗಲೇ ಕಾವೇರಿಯಿಂದ ಹತ್ತು ಟಿಎಂಸಿ ನೀರು ಬೆಂಗಳೂರಿಗೆ ಬರುತ್ತಿದ್ದು ಆಲಮಟ್ಟಿ ಆಣೆಕಟ್ಟೆಯಿಂದ ಹತ್ತು ಟಿಎಂಸಿ ನೀರು ಹರಿಸಿದರೆ ಚಿತ್ರದುರ್ಗ, ತುಮಕೂರು ಹೊರವಲಯ, ದೇವನಹಳ್ಳಿ ಸೇರಿದಂತೆ ಹಲವು ಕಡೆ ಕಿರು ಅಣೆಕಟ್ಟೆಗಳನ್ನು ನಿರ್ಮಿಸಿ ರಾಜಧಾನಿಗೆ ಮಾತ್ರವಲ್ಲದೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸಬಹುದು ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ವರದಿ ಹೇಳಿತ್ತು.

ಆದರೆ ಆಲಮಟ್ಟಿ ಆಣೆಕಟ್ಟೆಯಲ್ಲಿ ಮಳೆಗಾಲದಲ್ಲಿ ಸಂಗ್ರಹವಾಗಿ ಹೊರಬೀಳುವ ನೀರು ಹರಿಸುವ ಯೋಜನೆಗೆ ಉತ್ತರ ಕರ್ನಾಟಕ ಭಾಗದಿಂದ ತೀವ್ರ ವಿರೋಧ ಕೇಳಿ ಬರಬಹುದು ಎಂಬ ಕಾರಣಕ್ಕಾಗಿ ಆ ವರದಿಯ ಶಿಫಾರಸನ್ನು ಜಾರಿಗೊಳಿಸಲು ಅಂದಿನ ಸರ್ಕಾರ ಮುಂದಾಗಲಿಲ್ಲ.

ಪರಿಣಾಮವಾಗಿ ಆಲಮಟ್ಟಿ ಆಣೆಕಟ್ಟೆ ಹಾಗೂ ಕಾವೇರಿಯಿಂದ ಲಭ್ಯವಾಗುವ ನೀರಿನಲ್ಲಿ ಒಂದು ಪಾಲನ್ನು ಒಳನಾಡಿಗೆ ಹರಿಸುವ, ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳ ಬಾಯಾರಿಕೆಯನ್ನು ತಣಿಸುವ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿ ನೆನೆಗುದಿಗೆ ಬಿತ್ತು.

ಆದರೆ ವರದಿ ಬಂದ ನಂತರ ರಾಜ್ಯದ ಮೂಲಕ ಕೃಷ್ಣಾ ನದಿ ಪಾತ್ರದಿಂದ ನೆರೆ ರಾಜ್ಯಕ್ಕೆ ನಿಗದಿತ ನೀರಿಗಿಂತ ಹೆಚ್ಚುವರಿ ನೀರು ಹರಿಯುತ್ತಿದ್ದು ಕಳೆದ ವರ್ಷ ಸುಮಾರು 280 ಟಿಎಂಸಿಗಳಷ್ಟು ನೀರು ಹರಿದಿದೆ.

ಅದೇ ರೀತಿ ಕಳೆದ ವರ್ಷ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದಿದ್ದು,ಇದೀಗ ಕೃಷ್ಣಾ ನದಿಯ ಪ್ರಚಂಡ ಪ್ರವಾಹದಿಂದ ಜನ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾದ ನಂತರ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿಗೆ ಮರು ಜೀವ ಬಂದಿದೆ.

ಅಂದು ಕಟ್ಟಾ ಸುಬ್ರಮಣ್ಯ ನಾಯ್ಡು ವರದಿಯನ್ನು ಅನುಷ್ಟಾನಗೊಳಿಸಿದ್ದರೆ ಎರಡು ಸಾವಿರ ಕೋಟಿ ರೂಗಳಲ್ಲಿ ಕೃಷ್ಣಾ ನದಿ ಹಾಗೂ ಕಾವೇರಿ ನದಿ ನೀರನ್ನು ತರಬಹುದಿತ್ತು. ಆದರ ವೆಚ್ಚ ಈಗ ನಾಲ್ಕು ಸಾವಿರ ಕೋಟಿ ರೂಗಳಾದರೂ ಯೋಜನೆಯನ್ನು ಜಾರಿಗೊಳಿಸಿದರೆ ದಶಕಗಳ ಕಾಲ ಕರ್ನಾಟಕವೇ ಕುಡಿಯುವ ನೀರಿನ ವಿಷಯದಲ್ಲಿ ನೆಮ್ಮದಿಯಿಂದಿರಬಹುದು ಎಂಬುದು ಈಗ ವ್ಯಾಪಕವಾಗಿ ಕೇಳಿ ಬರುತ್ತಿರುವ ಮಾತು.

ಈ ವಿಷಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಅದೇ ರೀತಿ ನೆರೆ ರಾಜ್ಯದಲ್ಲೂ ಬಿಜೆಪಿ ಫ್ರೆಂಡ್ಲಿ ಸರ್ಕಾರವೇ ಇದೆ. ಹೀಗಾಗಿ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿಯನ್ನು ತ್ವರಿತವಾಗಿ ಜಾರಿಗೆ ತರಬೇಕು.

ಇಲ್ಲವೇ ಈ ಬಾರಿ ಕಾಣಿಸಿಕೊಂಡ ಪರಿಸ್ಥಿತಿಯನ್ನು ಮುಂದಿನ ವರ್ಷಗಳಲ್ಲೂ ನಿರಂತರವಾಗಿ ಕಾಣುತ್ತಾ ಹೋಗಬೇಕು. ಹೀಗಾಗಿ ಜನ ಅನುಭವಿಸುವ ಸಂಕಟದ ಪರಿಹಾರಕ್ಕೆ,ಪ್ರವಾಹದ ನೀರಿನ ಸದ್ಭಳಕೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ವರದಿ ಅನುಕೂಲಕರ ಎಂಬುದು ಅಧಿಕಾರಿಗಳ ಮಾತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ