ವರುಣನ ಆರ್ಭಟದಿಂದ ಉಂಟಾದ ಪ್ರವಾಹ ಹಿನ್ನಲೆ-ಛಿದ್ರಗೊಂಡ ಉತ್ತರ ಕರ್ನಾಟಕದ ಜನತೆಯ ಬದುಕು

ಬೆಂಗಳೂರು, ಆ.9- ಕುಸಿದ ಮನೆಗಳು, ಕೊಚ್ಚಿ ಹೋದ ಬದುಕು, ಮುರಿದು ಬಿದ್ದ ಭರವಸೆ.. ಕಳೆದ ಒಂದು ವಾರದಿಂದ ನೀರಿನಲ್ಲೇ ಬದುಕು.. ಕ್ಷಣ ಕ್ಷಣಕ್ಕೂ ಆತಂಕ.. ಕಣ್ಮರೆಯಾದ ತಮ್ಮವರಿಗಾಗಿ ಹುಡುಕಾಟ.. ಪ್ರವಾಹದಲ್ಲಿ ಜೀವ ಕಳೆದುಕೊಂಡ ಸಂಬಂಧಿಕರ ಗೋಳಾಟ..ಮುಂದುವರೆದ ವರುಣನ ಆರ್ಭಟದಿಂದ ಉಂಟಾದ ಪ್ರವಾಹ ಉತ್ತರ ಕರ್ನಾಟಕದ ಜನತೆಯ ಬದುಕನ್ನೇ ಛಿದ್ರಗೊಳಿಸಿದೆ.

ಇತ್ತ ಮಡಿಕೇರಿ ಮತ್ತೆ ಮಳೆಯ ಅಪಾಯಕ್ಕೆ ಸಿಲುಕಿಕೊಂಡಿದೆ. ಗುಡ್ಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಹುಣಸೂರಿನ ಸಮೀಪದ ಹಾಡಿಯಲ್ಲಿ ಒಬ್ಬರು ಮೃತಪಟ್ಟಿದ್ದರೆ, ರಾಯಭಾಗದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮೃತರ ಸಂಖ್ಯೆ 25ಕ್ಕೆ ಏರಿದೆ.

ಇಂದು ಬೆಳಗ್ಗೆ ರಾಯಭಾಗ ತಾಲೂಕು ಗುಂಡವಾಡು ಗ್ರಾಮದ ಗುಂಡು ಅಂಗಲಿ (34) ಎಂಬ ಯುವಕ ನಡೆದುಕೊಂಡು ಹೋಗುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದ ಹುಣಸೂರಿನ ವೀರನಹೊಸಹಳ್ಳಿಯ ಗಿರಿಜನ ಹಾಡಿಯ ಗಣೇಶ್(35) ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.

ಮಡಕೇರಿಯ ಭಾಗಮಂಡಲದ ಕೊರಂಗಾಲ ಸಮೀಪ ಮಣ್ಣು ಕುಸಿದು ಯಶವಂತ, ಬಾಲಕೃಷ್ಣ ಎಂಬುವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಮನಾ ಡಿ.ಪಣೇಕರ್ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಶಿಡ್ಲೆ ಸಮೀಪ ಭಾರೀ ಮಳೆಯಿಂದ ಕಾರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸತೀಶ್ (45) ಸಾವನ್ನಪ್ಪಿದ್ದಾರೆ.
ನೆರೆ ನರಕ ಸೃಷ್ಠಿಸಿದ್ದು , ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ತಮ್ಮ ಕಣ್ಣೆದುರೇ ತಮ್ಮವರನ್ನು ಕಳೆದುಕೊಂಡು ಗೋಳಾಡುತ್ತಿರುವವರು ಅದೆಷ್ಟೋ ಮಂದಿ. ತಾವು ಜೀವಮಾನವಿಡಿ ಸಂಪಾದಿಸಿದ ಆಸ್ತಿ-ಪಾಸ್ತಿಯೆಲ್ಲಾ ಮಳೆಯಲ್ಲಿ ಕೊಚ್ಚಿಹೋಯಿತಲ್ಲ ಎಂಬ ಸಂಕಟದೊಂದಿಗೆ ಪ್ರಾಣ ಕಾಪಾಡಿಕೊಳ್ಳಲು ಹರಸಾಹಸ, ಮುಂದೇನಾಗುತ್ತದೋ ಎಂಬ ಆತಂಕದಲ್ಲೇ ದಿನದೂಡುತ್ತಿರುವ ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ.

ದಿನೇ ದಿನೇ ಪ್ರವಾಹ ಹೆಚ್ಚಾಗುತ್ತಿದ್ದು, ನೀರಿನಲ್ಲಿ ಸಿಲುಕಿರುವವರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿಯ ಹಿಂಡಲಗಾ ಜೈಲಿಗೆ ನೀರು ನುಗ್ಗಿ ಖೈದಿಗಳು ರಾತ್ರಿಯಿಡೀ ನೀರಿನಲ್ಲೇ ಕಾಲ ಕಳೆದಿದ್ದಾರೆ. ಇತ್ತ ಹುಬ್ಬಳ್ಳಿಯ ಮೂರು ಸಾವಿರ ಮಠವೂ ಜಲಾವೃತವಾಗಿದೆ. ಮೊದಲ ಬಾರಿಗೆ ಗುರು ಸಿದ್ದೇಶ್ವರ ಕರ್ತೃ ಗದ್ದುಗೆಯವರೆಗೆ ನೀರು ಹರಿದಿದ್ದು, ಮಠದ ಅಂಗಳವೆಲ್ಲ ನೀರಿನಿಂದ ಆವರಿಸಿಕೊಂಡಿದೆ. ನೀರಿನಲ್ಲಿಯೇ ಪೂಜೆ ನೆರವೇರಿಸಲಾಗುತ್ತಿದೆ.

ಮಳೆಯ ರುದ್ರನರ್ತನಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ. ಭಾರೀ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ. ನದಿ ಪಾತ್ರದ ಪಟ್ಟಣ, ಗ್ರಾಮಗಳಿಗೆ ನೀರು ನುಗ್ಗಿ ರಕ್ಷಣಾ ಕಾರ್ಯ ನೆರವೇರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಯಾದಗಿರಿ, ಶಿವಮೊಗ್ಗ, ಉಡುಪಿ ಸೇರಿದಂತೆ 12 ಜಿಲ್ಲೆಗಳ 51 ತಾಲೂಕುಗಳಲ್ಲಿನ 732 ಗ್ರಾಮಗಳು ಜಲಾವೃತಗೊಂಡಿದ್ದು, ಇವರಿಗೆ 1,24,291 ಜನರನ್ನು ರಕ್ಷಣೆ ಮಾಡಲಾಗಿದೆ. 467 ಶಿಬಿರಗಳಲ್ಲಿ 94,662 ಜನರಿಗೆ ಆಶ್ರಯ ಒದಗಿಸಲಾಗಿದೆ. ಇವರಿಗೆಲ್ಲ ದೈನಂದಿನ ವಸ್ತುಗಳನ್ನು ಒದಗಿಸುವುದು ದುಸ್ತರವಾಗಿದೆ. ನೆರೆ ಸೃಷ್ಠಿಸಿರುವ ನರಕದಿಂದ ಲಕ್ಷಾಂತರ ಹೆಕ್ಟೇರ್ ಹೊಲ, ಗದ್ದೆ ಜಲಾವೃತವಾಗಿದ್ದು ಲಕ್ಷಾಂತರ ಜನರ ಬದುಕು ಬೀದಿಪಾಲಾಗಿದೆ.

ಇಂದೂ ಕೂಡ ಹಲವು ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿವೆ. ಸಂಪರ್ಕ ಕಡಿತವಾಗಿದೆ. ವಿದ್ಯುತ್ ವ್ಯತ್ಯಯ, ದೂರವಾಣಿ ಸಂಪರ್ಕ, ಮೊಬೈಲ್, ಇಂಟರ್ ನೆಟ್ ಸಂಪರ್ಕ ಕಡಿತಗೊಂಡು ಜನ ತಮ್ಮ ಎಂದಿನ ಕೆಲಸಗಳಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿನಲ್ಲಿ ಸಿಲುಕಿದವರ ಪರಿಸ್ಥಿತಿ ಹೇಳತೀರದಾಗಿದೆ. ಸಂತ್ರಸ್ತರ ರಕ್ಷಣೆಗೆ ಸೇನಾಪಡೆ ಜೊತೆ ನೌಕಾಪಡೆಯೂ ಕೈಜೋಡಿಸಿದೆ.

ಇತ್ತ ಮಲೆನಾಡು ಭಾಗದಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು, ಶಿವಮೊಗ್ಗ , ಕಾರವಾರ, ಉಡುಪಿ, ದ.ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಕಳಸಾ-ಮಂಗಳೂರು ಸಂಚಾರ ಬಂದ್ ಆಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ಸಂಚಾರ ಬಂದ್ ಆಗಿತ್ತು. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕೊಂಡಿಯಾಗಿದ್ದ ಹೆಬ್ಬಾಳೆ ಸೇತುವೆ ಸಹ ಮುಳುಗಡೆಯಾಗಿದೆ.

ಕುದುರೆಮುಖ, ಕಳಸಾ, ಸಂಸೆ ಭಾಗದಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ತುಂಗಾ, ಭದ್ರಾ, ನೇತ್ರಾವತಿ, ವೇದಾವತಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಹಾಸನ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ತಾಲೂಕುಗಳಲ್ಲಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.

ಯಗಚಿ ನದಿ ಭರ್ತಿಯಾಗಿದ್ದು ಐದು ಕ್ರೆಸ್ಟ್ ಗೇಟ್‍ಗಳ ಮೂಲಕ 5 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ