ಸಿಎಂ ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರಗಳಿಗೆ ಹೈಕಮಾಂಡ್ ಬ್ರೇಕ್

ಬೆಂಗಳೂರು, ಆ.8- ಸಚಿವ ಸಂಪುಟ ರಚನೆಯಾಗಿಲ್ಲ ಎಂಬ ಪ್ರತಿಪಕ್ಷಗಳ ಟೀಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರಗಳಿಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕುತ್ತಲೇ ಇದೆ.

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಪಡೆಯಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪನವರಿಗೆ ನಿರಾಸೆ ಉಂಟಾಗಿದೆ.

ಪ್ರತಿ ವಿಚಾರದಲ್ಲಿ ಯಡಿಯೂರಪ್ಪನವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‍ನ ಅನುಮತಿ, ಸಮ್ಮತಿ ಇಲ್ಲದೆ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎಂದರೆ ಸ್ಪೀಕರ್ ಆಯ್ಕೆ ವಿಚಾರ ಹಾಗೂ ಸಂಪುಟ ವಿಸ್ತರಣೆಗಾಗಿ ಇನ್ನೂ ಗ್ರೀನ್ ಸಿಗ್ನಲ್ ದೊರೆಯದಿರುವುದು.

ಅಂದು ಬಿಎಸ್‍ವೈ ಸ್ಪೀಕರ್ ಆಯ್ಕೆಗೆ ಕೆ.ಜಿ.ಬೋಪಯ್ಯ ಹೆಸರನ್ನು ಅಂತಿಮಗೊಳಿಸಿದ್ದರು. ರಾತ್ರೋರಾತ್ರಿ ಹೆಸರು ಬದಲಾಯಿಸಿ ಕೊನೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಿದಾಗಲೇ ಯಡಿಯೂರಪ್ಪನವರ ಆಟೋಟೊಪಗಳಿಗೆ ಕಡಿವಾಣ ಬೀಳಲಿದೆ ಎಂಬ ಮುನ್ಸೂಚನೆ ಸಿಕ್ಕಿತ್ತು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ವಿಧಾನಸಭೆಯ ಸ್ಪೀಕರ್ ಆಯ್ಕೆಯಲ್ಲಿ ಹೈಕಮಾಂಡ್ ನಿರ್ಧಾರ ಏನಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗೇ ತಿಳಿದಿತ್ತು. ಈ ಮೂಲಕ ಯಡಿಯೂರಪ್ಪನವರ ಏಕ್ಷಪಕ್ಷೀಯ ನಿರ್ಧಾರಗಳಿಗೆ ಬ್ರೇಕ್ ಹಾಕುತ್ತಲೆ ಬರುತ್ತಿದೆ.

ಯಡಿಯೂರಪ್ಪ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೈಕಮಾಂಡ್ ಮುಖಂಡರನ್ನು ಭೇಟಿಯಾಗಿ, ಸಚಿವ ಸಂಪುಟ ರಚನೆ ಕುರಿತು ಚರ್ಚಿಸಿದ್ದರು.

ಆದರೆ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೂಡಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ.

ಗುರುವಾರ ಅಥವಾ ಶುಕ್ರವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ನಿರೀಕ್ಷಿಸಸಲಾಗಿತ್ತು. ಅಮಿತ್‍ಷಾ- ಯಡಿಯೂರಪ್ಪ ಮುಂದಿನ ಭೇಟಿ ಆ.12ಕ್ಕೆ ನಿಗದಿಯಾಗಿದೆ. ಆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿವಸಕ್ಕೆ ಮುನ್ನವೇ, ಅಂದರೆ ಆ.13ಕ್ಕೆ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ.

ಈಗಾಗಲೇ ಏಕವ್ಯಕ್ತಿ ಆಡಳಿತ ನಡೆಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ನಡೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೈ ಕಮಾಂಡ್ ನಿರ್ಧಾರದ ಹೊರತಾಗಿ ಬಿಎಸ್‍ವೈ ಸಂಪುಟ ವಿಸ್ತರಣೆ ಅಸಾಧ್ಯವಾಗಿದೆ.

ಅಂಕುಶಕ್ಕೆ ಕಡಿವಾಣ?
ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಸಾಧ್ಯವಾಗಲೇ ಇಲ್ಲ. ಸಂಸತ್‍ನ ಕಲಾಪದಲ್ಲಿ ಭಾಗವಹಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೆಲವರನ್ನು ಮಾತ್ರ ಭೇಟಿಯಾಗಿದ್ದರು.

ರಾಜ್ಯದಲ್ಲಿ ಸಮ್ಮಿಶ್ರ ಪತನಗೊಂಡಾಗ ಯಡಿಯೂರಪ್ಪ ಮರುದಿನವೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಿದ್ದವಾಗಿದ್ದರು. ಆಗಲೂ ಕೂಡ ಕೇಂದ್ರ ವರಿಷ್ಠರು ಸಾಕಷ್ಟು ಅಳೆದು ತೂಗಿಯೇ ಹಸಿರು ನಿಶಾನೆ ತೋರಿದ್ದರು.

ಈ ಮೂಲಕ ನೀವು ಮುಖ್ಯಮಂತ್ರಿಯಾದರೂ ಅಧಿಕಾರ ನಿಯಂತ್ರಣ ನಮ್ಮ ಕೈಯಲ್ಲೇ ಇರುತ್ತದೆ ಎಂಬ ಸಂದೇಶವನ್ನು ಮತ್ತೆ ರವಾನೆ ಮಾಡಿದ್ದಾರೆ.

ಯಡಿಯೂರಪ್ಪ ದೆಹಲಿಗೆ ತೆರಳಿದ ವೇಳೆ ಸಂಪುಟಕ್ಕೆ ತೆಗೆದುಕೊಳ್ಳಬಹುದಾದ ಸಂಭಾವ್ಯ ಪಟ್ಟಿಯನ್ನು ಒಯ್ದಿದ್ದರು. ಮುಖ್ಯವಾಗಿ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಸವರಾಜ್ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಉಮೇಶ್‍ಕತ್ತಿ, ಶ್ರೀರಾಮುಲು, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಆರ್.ಅಶೋಕ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೊದಲ ಪಟ್ಟಿಯಲ್ಲಿ ಕನಿಷ್ಟ 10 ಮಂದಿಗೆ ಮಂತ್ರಿ ಸ್ಥಾನ ನೀಡುವ ಲೆಕ್ಕಾಚಾರದಲ್ಲಿ ಇದ್ದರು.

ಬಿಎಸ್‍ವೈ ಅವರನ್ನು ನಿಯಂತ್ರಿಸಲೆಂದೇ ದೆಹಲಿಯಲ್ಲೇ ಕುಳಿತುಕೊಂಡಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತೆರೆಮರೆಯಲ್ಲೇ ಕುಳಿತುಕೊಂಡು ಯಡಿಯೂರಪ್ಪನವರ ಪಟ್ಟಿಗೆ ಅಂಕಿತ ಹಾಕದಂತೆ ಕೈಚಳಕ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರ ನಿರ್ದೇಶನದಂತೆ ಸಂಪುಟ ವಿಸ್ತರಣೆ ಮಾಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾದ ಭಿನ್ನಮತ ನಮ್ಮಲ್ಲೂ ಮರುಕಳಿಸಲಿದೆ ಸದ್ಯಕ್ಕೆ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ವಿಸ್ತರಣೆ ಮಾಡಿದರೆ ಜನತೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಅಲ್ಲದೆ ಇದಕ್ಕೆ ಅನುಮತಿ ನೀಡಿದರೆ ಬಿಎಸ್‍ವೈ ಲಗಾಮ್ ಇಲ್ಲದೆ ಮುನ್ನಡೆಯತ್ತಾರೆ.

2008ರಲ್ಲಿ ನಡೆದ ಪ್ರಮಾದಗಳು ಮರುಕಳಿಸಲಿವೆ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಮುಂದೂಡುವುದೇ ಸರಿಯಾದ ಕ್ರಮ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಈ ಬಾರಿ ಸರ್ಕಾರದಲ್ಲಿ ಯಡಿಯೂರಪ್ಪ ಕೇವಲ ಉತ್ಸವ ಮೂರ್ತಿಯಾಗಲಿದ್ದಾರೆ. ಬ್ರೇಕ್, ಕ್ಲಚ್, ಚಾಲಕ ಎಲ್ಲವೂ ದೆಹಲಿಯ ನಾಯಕರ ನಿಯಂತ್ರಣದಲ್ಲಿರುತ್ತದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ