ಶಾಸಕ ಕುಲದೀಪ್ ಸಿಂಗ್ ಸೆನೆಗರ್ ವಿರುದ್ಧ ಆರೋಪ ದಾಖಲು

ನವದೆಹಲಿ, ಆ.9- ಉತ್ತರ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಆರೋಪಗಳನ್ನು ಇಂದು ದಾಖಲಿಸಿದೆ.

ಸೆನೆಗರ್ ಅಲ್ಲದೆ ಅವರ ಪರಮಾಪ್ತ ಶಶಿಸಿಂಗ್ ಎಂಬಾತನ ವಿರುದ್ಧವೂ ನ್ಯಾಯಾಲಯ ಆರೋಪಗಳನ್ನು ದಾಖಲಿಸಿಕೊಂಡಿದೆ.

ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮ ಅವರು ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕ್ರಿಮಿನಲ್ ಪಿತೂರಿ, ಒಳಸಂಚು, ಅಪಹರಣ, ಹಲ್ಲೆ, ಅತ್ಯಾಚಾರ ಮತ್ತು ಪ್ರಾಣ ಬೆದರಿಕೆ ಆಪಾದನೆಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳನ್ನು ದಾಖಲಿಸಿದರು.

ಸಿಬಿಐ ನಿನ್ನೆಯಷ್ಟೆ ಕುಲದೀಪ್‍ಸಿಂಗ್ ಮತ್ತು ಅವರ ಸಹೋದರನ ವಿರುದ್ಧ ಉನ್ನಾವೋ ಸಂತ್ರಸ್ತೆ ತಂದೆ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿತ್ತು.

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇತ್ತೀಚೆಗೆ ಉನ್ನಾವೋ ಸಂತ್ರಸ್ತೆ ಹಾಗೂ ಆಕೆಯ ವಕೀಲರು ಮತ್ತು ಸಂಬಂಧಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಅಪ್ಪಳಿಸಿತ್ತು.

ಸಂತ್ರಸ್ತೆ ತೀವ್ರ ಗಾಯಗೊಂಡಿದ್ದು, ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಇದು ಕೊಲೆ ಯತ್ನದ ಕೃತ್ಯ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ