ಉಭಯ ದೇಶಗಳು ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು- ಅಂಟೋನಿಯೋ ಗುಟೆರ್ರಸ್

ವಿಶ್ವಸಂಸ್ಥೆ, ಆ.9- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ನಂತರ ಪಾಕಿಸ್ತಾನದಿಂದ ರಾಜತಾಂತ್ರಿಕ ಸಂಬಂಧ ಕಡಿತ ಮತ್ತು ಇತರ ಸೇಡಿನ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿರುವ ಕಾಶ್ಮೀರ ಬಿಕ್ಕಟ್ಟು ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಸ್ ಉಭಯ ದೇಶಗಳು ಗರಿಷ್ಠ ಸಂಯಮ ಕಾಯ್ದುಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಸಂಸ್ಥೆ ಮುಖ್ಯಸ್ಥ ವಕ್ತಾರ ಸ್ಟೀಫನ್ ಡೂಜಾರಿಕ್ ಮೂರನೇ ವ್ಯಕ್ತಿ ಅಥವಾ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಆಸ್ಪದ ನೀಡಿದ 1972ರ ಶಿಮ್ಲಾ ಒಪ್ಪಂದವನ್ನು ಗುಟೆರ್ರಸ್ ಅವರು ಉಲ್ಲೇಖಿಸಿರುವುದಾಗಿ ತಿಳಿಸಿದರು.

ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ನಿನ್ನೆಯಷ್ಟೆ ಪಾಕಿಸ್ತಾನ ಮನವಿ ಮಾಡಿತ್ತು. ಇದರ ಬೆನ್ನಲ್ಲೆ ಸಂಯುಕ್ತ ರಾಷ್ಟ್ರಗಳ ಮುಖ್ಯಸ್ಥರು ಈ ಪ್ರತಿಕ್ರಿಯೆ ನೀಡಿದ್ದಾರೆ.

370ನೇ ವಿಧಿ ರದ್ಧತಿ ನಂತರ ಭಾರತ ಮತ್ತು ಕಾಶ್ಮೀರದ ನಡುವೆ ಉಲ್ಭಣಗೊಂಡಿರುವ ರಾಜತಾಂತ್ರಿಕ ಸಂಘರ್ಷದ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರು ಆತಂಕಗೊಂಡಿದ್ದಾರೆ. ಶಿಮ್ಲಾ ಒಪ್ಪಂದಕ್ಕೆ ಎರಡು ದೇಶಗಳು ಬದ್ದವಾಗಿರುವಂತೆ ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಇಂಡೋ-ಪಾಕ್ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಮೆರಿಕಾ ಪ್ರತಿಕ್ರಿಯೆ:
ಕಾಶ್ಮೀರ ವಿಷಯದಲ್ಲಿ ಅಮೆರಿಕಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ವಾಷಿಂಗ್ಟನ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿದೇಶಾಂಗ ಇಲಾಖೆ ವಕ್ತಾರ ಮೊರಗನ್ ಓರೆಗಸ್ ಕಾಶ್ಮೀರ ವಿಷಯದ ಬಗ್ಗೆ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯ ಮೂಲಕ ಇತ್ಯರ್ಥಗೊಳಿಸಬೇಕು. ಈ ವಿವಾದ ಬಗೆಹರಿಸಿಕೊಳ್ಳುವ ವಿಷಯ ಆ ಎರಡು ರಾಷ್ಟ್ರಗಳ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

370ನೇ ವಿಧಿ ರದ್ಧತಿ ನಂತರ ಉಭಯ ದೇಶಗಳ ನಡುವೆ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು. ಅಲ್ಲದೆ ಎರಡು ದೇಶಗಳು ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕೆಂದು ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ