ಬೆಂಗಳೂರು,ಆ.9- ಪ್ರತಿಯೊಬ್ಬ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆ ವಿಸ್ತರಣೆ, ಹೊಸ ಪಿಂಚಣಿ ರದ್ದುಪಡಿಸಿ ಹಳೆ ಮಾದರಿ ಜಾರಿ, ಖಾಲಿ ಇರುವ ಹುದ್ದೆಗಳ ಭರ್ತಿ, ನೌಕರರ ಹಿತರಕ್ಷಣೆ, ವೇತನ ತಾರತಮ್ಯ ನಿವಾರಣೆ, ಹಾಲಿ ಇರುವ ಬೈಲಾವನ್ನು ತಿದ್ದುಪಡಿ ಮಾಡುವುದು, ಪ್ರತಿಯೊಬ್ಬ ಪದಾಧಿಕಾರಿಗಳು ಅಧಿಕಾರ ಹಂಚಿಕೆ, ಸರ್ಕಾರ ಮತ್ತು ಸಂಘದ ನಡುವೆ ಸಮನ್ವಯ ಸಾಧಿಸುವುದು…
ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಎಸ್.ಷಡಕ್ಷರಿ ಅವರ ಸ್ಪಷ್ಟ ಮಾತುಗಳಿವು. ಮಧ್ಯಕರ್ನಾಟಕದವರೊಬ್ಬರು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು.
ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪತ್ರಿಕೆಯೊಂದಿಗೆ ತಮ್ಮ ಮುಂದಿನ ಯೋಜನೆಗಳು, ನೌಕರರ ಹಿತರಕ್ಷಣೆಗೆ ಜಾರಿ ಮಾಡುವ ಕಾರ್ಯಕ್ರಮಗಳು, ಸಂಘದ ಕಾಯಕಲ್ಪ ಸೇರಿದಂತೆ ಮತ್ತಿತರರ ಮಹತ್ವದ ವಿಷಯಗಳ ಬಗ್ಗೆ ಹಂಚಿಕೊಂಡರು.
ಸಂದರ್ಶನದ ಸಾರಾಂಶ:
ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದೆ ಜಾರಿಯಲ್ಲಿದ್ದ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು. ಹೊಸ ಪಿಂಚಣಿ ಬಂದಿದ್ದರಿಂದ ಲಕ್ಷಾಂತರ ನೌಕರರಿಗೆ ತೊಂದರೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಶೀಘ್ರದಲ್ಲೇ ಚರ್ಚಿಸಲಾಗುವುದು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ನೌಕರರಿಗೂ ಕಾಲ ಕಾಲಕ್ಕೆ ವೇತನ, ಭತ್ಯೆ ಸೇರಿದಂತೆ ಮತ್ತಿತರ ಸವಲತ್ತುಗಳನ್ನು ಅನುಷ್ಠಾನಗೊಳಿಸಬೇಕು. 6ನೇ ವೇತನ ಆಯೋಗದಲ್ಲಿ ಕೆಲವು ಸಣ್ಣಪುಟ್ಟ ಲೋಪದೋಷಗಳು ಕಂಡುಬಂದಿದ್ದು, ಸರಿಪಡಿಸಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದೇನೆ.
ಆರೋಗ್ಯ ಭಾಗ್ಯ ಯೋಜನೆ ಸವಲತ್ತು ಕೇವಲ ಪೆÇಲೀಸ್ ಇಲಾಖೆಗೆ ಮಾತ್ರ ಲಭ್ಯವಿತ್ತು. ಇದನ್ನು ಎಲ್ಲಾ ಹಂತದ ನೌಕರರಿಗೂ ವಿಸ್ತರಣೆ ಮಾಡುವ ಅಗತ್ಯವಿದೆ.
ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಮತ್ತೊಮ್ಮೆ ಭೇಟಿಯಾಗಿ ಯೋಜನೆಯನ್ನು ಎಲ್ಲರಿಗೂ ವಿಸ್ತರಣೆ ಮಾಡುವಂತೆ ಕೋರಲಾಗುವುದು.
ರಾಜ್ಯದ ವಿವಿಧ ಇಲಾಖೆಗಳಲ್ಲಿಸುಮಾರು 2,40,000 ಹುದ್ದೆಗಳು ಖಾಲಿಯಿವೆ. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ತುಸು ವಿಳಂಬವಾಗುತ್ತಿದೆ. ಹಂತ ಹಂತವಾಗಿ ಕಾಲ ಮಿತಿಯೊಳಗೆ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಲಾಗುವುದು.
ಸರ್ಕಾರಿ ನೌಕರರ ಸಂಘ ಅಸ್ತಿತ್ವಕ್ಕೆ ಬಂದ ನಂತರ ಈವರೆಗೂ ಹಳೇ ಬೈಲಾದಲ್ಲೇ ಕಾರ್ಯ ನಿರ್ವಹಿಸಲಾಗುತ್ತಿದೆ. ಈಗಿರುವ ಬೈಲಾಕ್ಕೆ ತಿದ್ದುಪಡಿ ಮಾಡಬೇಕೆಂಬುದು ಬಹುತೇಕರ ಬೇಡಿಕೆಯಾಗಿದೆ. ಇದೇ 16ರಂದು ಪದಾಧಿಕಾರಿಗಳ ಸಭೆ ಸೇರಿ ಮೊದಲು ಬೈಲಾಕ್ಕೆ ತಿದ್ದುಪಡಿ ಮಾಡಿ ಹೊಸ ಬೈಲಾ ಜಾರಿ ಮಾಡುವ ಗುರಿಯನ್ನು ಹೊಂದಿದ್ದೇವೆ.
ಬೆಂಗಳೂರಿನಲ್ಲಿರುವ ಕೆಜಿಐಡಿ ಕಟ್ಟಡವನ್ನು ಸಂಪೂರ್ಣವಾಗಿ ಗಣಿಕೀಕೃತ ಮಾಡುವ ಉದ್ದೇಶ ಹೊಂದಲಾಗಿದೆ.
ನೌಕರರು ಸಣ್ಣಪುಟ್ಟ ಕೆಲಸಕ್ಕೆ ಅರ್ಜಿ ಕೊಟ್ಟರೆ ತಿಂಗಳುಗಟ್ಟಲೇ ಕಾಯಗಬೇಕು, ಹಾಲಿ ಇರುವ ವ್ಯವಸ್ಥೆಯನ್ನು ಬದಲಾಯಿಸಿ ಗಣಕೀಕೃತ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿ ಮಾಡಲಿದ್ದೇವೆ.
ಅನಾಮಧೇಯ ಪತ್ರಗಳ ಆಧಾರದಲ್ಲಿ ನೌಕರರ ಮೇಲೆ ತನಿಖೆ ನಡೆಸಬಾರದೆಂದು ಈಗಾಗಲೇ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇವೆ. ಇದನ್ನು ರದ್ದುಪಡಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ.
ನೌಕರರ ಹಿತ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅಧಿಕಾರ ವಿಕೇಂದ್ರೀಕರಣವು ನಮ್ಮ ಮೊದಲ ಆದ್ಯತೆಯಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಎಲ್ಲರಿಗೂ ಜವಾಬ್ದಾರಿಯನ್ನು ನೀಡಲಾಗುವುದು.
ಕಟ್ಟಡಗಳನ್ನು ಆಧುನೀಕರಣಗೊಳಿಸುವುದು, ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಸರ್ಕಾರದ ಯೋಜನೆಗಳನ್ನು ತ್ವರಿತಗತಿಯಲ್ಲಿ ಕಾರ್ಯಗತಗೊಳಿಸಿ, ಸೋರಿಕೆ ತಡೆಗಟ್ಟಿ ನೌಕರರ ಹಿತ ಕಾಪಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ.