ಬೆಂಗಳೂರು,ಆ.9- ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಸಚಿವ ಸಂಪುಟ ರಚಿಸಿ ನೆರೆ ಸಂತ್ರಸ್ತರಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಬದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಎಂಎಫ್ಗೆ ತಮ್ಮ ಸಂಬಂಧಿಕರನ್ನು ನೇಮಿಸಲು ಹೆಚ್ಚು ಆತುರ ತೋರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ನೇಮಕಾತಿ ಆದೇಶವನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮೈಸೂರು ನಗರದ ಟಿ.ನರಸೀಪುರ ರಸ್ತೆಯ ನಂದಿನಿಲೇಔಟ್ನ ಎಸ್.ಸಿ.ಅಶೋಕ್ ಅವರನ್ನು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ದಿನಾಂಕವನ್ನೂ ಕೂಡ ಕೈನಲ್ಲಿ ಬರೆಯಲಾಗಿದ್ದು, ಆ.5ರಂದು ನೇಮಿಸಿರುವುದಾಗಿ ತಿಳಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಟ್ಯಾಗ್ ಮಾಡಿರುವ ಸಿದ್ದರಾಮಯ್ಯ ಅವರು, ಕೆಎಂಎಫ್ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಚಿವ ಸಂಪುಟ ರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ? ಏಕ ಚಕ್ರಾಧಿಪತಿಗಳೇ ಎಂದು ಯಡಿಯೂರಪ್ಪನವರನ್ನು ಕಟುಕಿದ್ದಾರೆ.
ಸಚಿವ ಸಂಪುಟ ಸದಸ್ಯರ ಅನುಮೋದನೆಗೆ ಸಮಯವಿಲ್ಲದ ನಿಮ್ಮ ಹೈಕಮಾಂಡ್ ಕೆಎಂಎಫ್ಗೆ ಸದಸ್ಯರ ನೇಮಕಕ್ಕೆ ಹೇಳಿತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನೆರೆ ಪೀಡಿತರ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ಯಾವುದೇ ನೆರವು ಕೇಳಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ರಾಜ್ಯದ ಜನ ಪ್ರವಾಹದಿಂದ ತತ್ತರಿಸುತ್ತಿರುವುದನ್ನು ನೋಡಿಯೂ ಕೇಂದ್ರ ಸಚಿವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಸಂಸದರೂ ಆಗಿರುವ ಪ್ರಹ್ಲಾದ್ ಜೋಷಿ ಅವರಿಗೆ ರಾಜ್ಯ ಸರ್ಕಾರ ನೆರವಿಗಾಗಿ ಮೊರೆ ಹಿಡಬೇಕಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸರ್ಕಾರ ಎಂದು ಲೇವಡಿ ಮಾಡಿದರು.