ಬೆಂಗಳೂರು, ಆ.8- ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಅಗತ್ಯ ರಕ್ಷಣಾ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ರಾಜ್ಯದ ಹಲವು ಕಡೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು , ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಒಂದೇ ದಿನಕ್ಕೆ ಪ್ರವಾಹವನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಹೈಕಮಾಂಡ್ ಆದೇಶ ನೀಡಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಾಜ್ಯ ಸರ್ಕಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ನಾನ್ಯಾರು? ಎಂದರು.
ಪ್ರವಾಹ ಪೀಡಿತ ಪ್ರದೇಶಕ್ಕೆ ಅಲ್ಲಿನ ಜನರೇ ಸರ್ಕಾರದ ಬಗ್ಗೆ ಹೇಳುತ್ತಾರೆ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ರಾತ್ರಿ ಉತ್ತರ ಕರ್ನಾಟಕಕ್ಕೆ ಹೋಗಿರುವುದನ್ನು ಗಮನಿಸಿದ್ದೇನೆ. ಯಾರೇ ಹೋದರೂ ಪ್ರವಾಹವನ್ನು ನಿಲ್ಲಿಸಲು ಆಗುತ್ತಾ ? ಮುಖ್ಯಮಂತ್ರಿ ಜತೆ ರೈಲ್ವೆ ಸಚಿವರು ಹೋಗಿರುವುದನ್ನು ಗಮನಿಸಿದ್ದೇನೆ ಎಂದರು.