ನವದೆಹಲಿ/ಶ್ರೀನಗರ, ಆ.9- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದತಿ ಕ್ರಮವನ್ನು ಪ್ರಧಾನಿ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದರೂ ಕಾಶ್ಮೀರ ಕಣಿವೆ ಜನತೆಗೆ ಮಾತ್ರ ಸಂತೋಷವಾಗಿಲ್ಲ. ಇದು ಪ್ರಜಾಸತಾತ್ಮಕ ವಿರೋಧಿ ಕ್ರಮ ಎಂದೇ ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ಭೂಮಿ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ, ಕಾಶ್ಮೀರಿಗಳ ಹೃದಯವನ್ನು ಗೆದ್ದಿಲ್ಲ ಎಂದು ಹಲವು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸ್ಥಾನಮಾನ ರದ್ದುಮಾಡಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆ ಕೈಗೊಳ್ಳುವುದರಿಂದ ಪರಿಸರ ಸೂಕ್ಷ್ಮ ಪ್ರಾಂತ್ಯಕ್ಕೆ ಸಾಕಷ್ಟು ಹಾನಿಯಾಗಲಿದೆ ಎಂದು ಅಲ್ಲಿನ ವಿದ್ಯಾರ್ಥಿಗಳಿಂದ ಹಿಡಿದು ಅನೇಕ ವೃತ್ತಿಪರರವರೆಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
370ನೇ ವಿಧಿ ರದ್ದುಮಾಡಿ ಹೋಟೆಲ್, ಫ್ಲೈ ಒವರ್, ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಪೊರೇಟ್ ಕ್ಷೇತ್ರಗಳಿಗೆ ಮುಕ್ತ ಅವಕಾಶ ನೀಡುವುದರಿಂದ ಸುಂದರ ಪರಿಸರದ ಮೇಲೆ ಹಾನಿಯಾಗಲಿದೆ ಎಂದು ಕಾಶ್ಮೀರದ ಪತ್ರಕರ್ತರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಉತ್ತರ್ಖಂಡ್ ರಾಜ್ಯಗಳನ್ನು ಉದಾಹರಣೆಯಾಗುವ ನೀಡುವ ಅವರು, ಅಲ್ಲಿ ಮನೆಗಳು, ಕಟ್ಟಡಗಳ ನಿರ್ಮಾಣದಿಂದ ಹೇಗೆ ನದಿಗಳಿಗೆ ಹಾನಿಯಾಗುತ್ತಿದೆ ಎಂಬುದುನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.
ಸರ್ಕಾರ ಕಾಶ್ಮೀರದ ಭೂಮಿಯನ್ನು ಮಾತ್ರ ಪಡೆದಿದೆ. ಆದರೆ, ಅಲ್ಲಿನ ಜನರ ಹೃದಯವನ್ನು ಗೆದ್ದಿಲ್ಲ ಎಂದು ದೆಹಲಿ ಮೂಲದ ಫಿಸಿಯೋಥೆರಪಿ ಅಜಜ್ ಅಹ್ಮದ್ ಆರೋಪಿಸಿದ್ದಾರೆ.
ನಮ್ಮ ನಂಬಿಕೆ ಉಳಿಸಿಕೊಳ್ಳಬೇಕಾದರೆ ಮೊದಲು ನಮ್ಮ ವಿಶ್ವಾಸ ಪಡೆದುಕೊಳ್ಳಬೇಕಾಗುತ್ತದೆ. ಜಾತ್ಯಾತೀತ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಚರ್ಚೆ ನಡೆಸಬೇಕಾಗಿದೆ. ನಮ್ಮ ಕುಟುಂಬದವರು ತುರ್ತು ಪರಿಸ್ಥಿತಿಯಲ್ಲಿ ವಾಸಿಸಬೇಕಾಗಿದೆ. ಅವರಿಗೆ ಅಂಬ್ಯುಲೆನ್ಸ್ ಕೂಡಾ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.