ಬೆಂಗಳೂರು,ಆ.8- ಜನಜೀವನ ಸಂಪೂರ್ಣವಾಗಿ ಜರ್ಝರಿತ ಮಾಡಿರುವ ಕುಂಭದ್ರೋಣ ಮಳೆಯ ಅನಾಹುತಗಳನ್ನು ತಗ್ಗಿಸಲು ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಹರಸಾಹಸಪಡುತ್ತಿವೆ. ಪರಿಹಾರ ಕಾರ್ಯಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು, ಗದಗ, ಕೊಪ್ಪಳ, ಧಾರವಾಡ, ಬಳ್ಳಾರಿ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾಜ್ಯ ಸರ್ಕಾರ ಹೈದರಾಬಾದ್ ಹಾಗೂ ಇತರ ರಾಜ್ಯಗಳಿಂದ 12 ಎನ್‍ಡಿಆರ್‍ಎಫ್ ತಂಡಗಳನ್ನು ಕರೆಸಿಕೊಂಡಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ 60 ಮಂದಿ ಎನ್‍ಡಿಆರ್‍ಎಫ್ ಸಿಬ್ಬಂದಿಗಳು, 400 ಸೈನಿಕರು, 43 ಎಸ್‍ಡಿಆರ್‍ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ರಾಯಚೂರು ಜಿಲ್ಲೆಗೆ 60 ಮಂದಿ ಎನ್‍ಡಿಆರ್‍ಎಫ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ ತಲಾ ಒಂದು ತಂಡ ಎನ್‍ಡಿಆರ್‍ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಿಗೂ ಪರಿಹಾರ ಕಾರ್ಯಕ್ಕಾಗಿ ಸೇನೆಯನ್ನು ನಿಯೋಸಲಾಗಿದೆ.
ವಾಯುಸೇನೆಯ 2 ಹೆಲಿಕಾಪ್ಟರ್‍ಗಳನ್ನು ಪರಿಹಾರ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನೀರಿನ ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಜಲಾ±ಯಗಳಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಎಲ್ಲ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಆರೋಗ್ಯ, ಕಂದಾಯ, ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಪ್ರಮುಖ ಇಲಾಖೆಗಳ ಸಿಬ್ಬಂದಿಗಳಿಗೆ ರಜೆ ಕಡಿತ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಊರುಗಳೆಲ್ಲ ಕೆರೆಗಳಾಗಿ ಮಾರ್ಪಟ್ಟಾಗಿದ್ದು, ವಾಹನ ಸಂಚಾರಕ್ಕೆ ಮಾರ್ಗವೇ ಇಲ್ಲದಂತಾಗಿದೆ.
ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಇಂದು ಬೆಳಗ್ಗೆವರೆಗೂ ಬೆಳಗಾವಿಯಲ್ಲಿ 6, ಉತ್ತರಕನ್ನಡದಲ್ಲಿ 2, ಶಿವಮೊಗ್ಗದಲ್ಲಿ ಒಂದು ಸೇರಿ ಒಟ್ಟು 9 ಜನರ ಜೀವಹಾನಿಯಾಗಿದೆ. ಪ್ರದೇಶಗಳಲ್ಲಿ 52 ಜಾನುವಾರುಗಳು ಸಾವನ್ನಪ್ಪಿವೆ.
47 ತಾಲ್ಲೂಕುಗಳ 503 ಗ್ರಾಮಗಳು ಜಲಾವೃತವಾಗಿದೆ. ನೆರೆ ಹಾವಳಿಗೆ ಸಿಲುಕಿದ ಸುಮಾರು 50 ಸಾವಿರ ಜನ ನಿರಾಶ್ರಿತರಾಗಿದ್ದಾರೆ. ಸರ್ಕಾರ 266 ಗಂಜಿ ಕೇಂದ್ರಗಳನ್ನು ಸ್ಥಾಪಿಸಿದೆ.
ಈವರೆಗೂ ಸುಮಾರು 17 ಸಾವಿರ ಮಂದಿ ನಿರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. 1.50 ಲಕ್ಷಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆ ನಷ್ಟವಾಗಿದೆ. ಸುಮಾರು 440ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ 16,000 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಸುಮಾರು 3000 ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆದು ನೀರು, ಮೇವು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 1410 ಕಿ.ಮೀ ರಸ್ತೆ, 211 ಬ್ರಿಡ್ಜ್‍ಗಳು ಮುಚ್ಚಿಹೋಗಿದ್ದು, 10 ಕೆರೆಗಳು ಒಡೆದು ಹೋಗಿವೆ. 4000 ಸರ್ಕಾರಿ ಕಟ್ಟಡಗಳು, 92 ನೀರು ಪೂರೈಸುವ ಘಟಕಗಳು, 2575 ವಿದ್ಯುತ್ ಕಂಬಗಳು ಮಳೆಯಿಂದ ಹಾನಿಗೊಳಗಾಗಿವೆ.
ಆಲಮಟ್ಟಿ , ನಾರಾಯಣಪುರ ಡ್ಯಾಮ್‍ಗಳು ಸಂಪೂರ್ಣ ತುಂಬಿದ್ದು, ನೀರಿನ ಒಳಹರಿವು ಸುಮಾರು 3 ಲಕ್ಷ ಕ್ಯೂಸೆಕ್ ಮೇಲ್ಪಟ್ಟಿದೆ. ಹೀಗಾಗಿ ನದಿಪಾತ್ರದ ಜನರನ್ನು ತೆರವುಗೊಳಿಸಿ ಮುನ್ನೆಚ್ಚರಿಕೆಯಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.