ಪ್ರವಾಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗುವ ಹಿನ್ನಲೆ-ಕಾಂಗ್ರೆಸ್ ಹಿರಿಯ ನಾಯಕರ ನೇತೃತ್ವದಲ್ಲಿ ಎರಡು ತಂಡಗಳ ರಚನೆ

ಬೆಂಗಳೂರು, ಆ.8- ಹನ್ನೊಂದು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗಲು ಕಾಂಗ್ರೆಸ್ ಹಿರಿಯ ನಾಯಕರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಕಾರ್ಯಕರ್ತರು ಕೂಡ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದೆ.

ಮಾಜಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಆರು ಮಂದಿಯ ತಂಡ ರಚಿಸಲಾಗಿದ್ದು, ಬೆಳಗಾವಿ ಭಾಗದ ಜಿಲ್ಲೆಗಳ ನೆರೆ ಹಾವಳಿಯ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ.

ತಂಡದಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ್, ಉಮಾಶ್ರೀ, ಶಿವಾನಂದಪಾಟೀಲ್, ಮಾಜಿ ಸಂಸದ ಐ.ಜಿ.ಸನದಿ ಇದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದ ತಂಡ ಗುಲ್ಬರ್ಗ ಭಾಗದ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದು, ವಿಧಾನಪರಿಷತ್ ಸದಸ್ಯ ಎನ್.ಎಸ್.ಬಸವರಾಜ್, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಶರಣಬಸಪ್ಪ ದರ್ಶನಾಪುರ್, ಅಜಯ್‍ಸಿಂಗ್, ಮಾಜಿ ಸಂಸದ ನಾಸೀರ್‍ಹುಸೇನ್ ತಂಡದಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಟ್ವಿಟರ್ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಹೇಳಿದ್ದಾರೆ.

ಹದಿನೈದು ಜಿಲ್ಲೆಗಳಲ್ಲಿ ನೆರೆ ಉಂಟಾಗಿ ಹಳ್ಳಿಗಳು ಮುಳುಗಿವೆ. ರಸ್ತೆಗಳ ಸಂಪರ್ಕ ಕಡಿತವಾಗಿವೆ. ರೈತರು, ಜಾನುವಾರು ಸಂಕಷ್ಟದಲ್ಲಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಂಕಷ್ಟದಲ್ಲಿರುವವರ ಸಹಾಯಕ್ಕೆ ದಾವಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ದಿನೇಶ್‍ಗುಂಡೂರಾವ್ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ