ಸಂವಿಧಾನ ವಿಧಿ 370 ರದ್ದು-ಈ ಬಗ್ಗೆ ನಮಗೆ ನಿಜಕ್ಕೂ ಆತಂಕವಿದೆ-ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ

ಚೆನ್ನೈ, ಆ.8- ರಾಜ್ಯಗಳಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಆಯಾ ರಾಜ್ಯಗಳ ಜನರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕೇ ಹೊರತು ಏಕಪಕ್ಷೀಯವಾಗಿ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಚೆನ್ನೈನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಡಾ.ಎಂ.ಕರುಣಾನಿಧಿ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಅವರು ಮಾತನಾಡಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ ಮಸೂದೆಯನ್ನು ತಂದಿದೆ. ಇದಕ್ಕೆ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದೆ. ರಾಷ್ಟ್ರಪತಿಗಳು ಅದಕ್ಕೆ ನಿನ್ನೆ ಅಂಕಿತ ಹಾಕಿದ್ದು ಸಂವಿಧಾನಕ್ಕೆ ಸೇರ್ಪಡೆಯಾಗಲಿದೆ.

ಸಂವಿಧಾನ ವಿಧಿ 370 ರದ್ದುಪಡಿಸಿರುವ ಬಗ್ಗೆ ನಮಗೆ ನಿಜಕ್ಕೂ ಆತಂಕವಿದೆ. ಕೆಲವೊಮ್ಮೆ ರಾಜಕೀಯ ಪಕ್ಷಗಳು ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ರಾಜ್ಯಗಳ ಜನರ ಅಭಿಪ್ರಾಯ ಪಡೆದುಕೊಂಡು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ಕೇಂದ್ರಕ್ಕೆ ಸಲಹೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ