ಜಿಟಿ ಜಿಟಿ ಮಳೆ-ಬೆಲೆ ಏರಿಕೆಯಿದ್ದರೂ ಹಬ್ಬಕ್ಕೆ ಜನರಿಂದ ಭರ್ಜರಿ ವ್ಯಾಪಾರ

ಬೆಂಗಳೂರು, ಆ.8- ನಗರದಲ್ಲಿ ಬೆಳಗ್ಗೆ 11 ಗಂಟೆ ನಂತರ ಜಿಟಿ ಜಿಟಿ ಮಳೆ ಸ್ವಲ್ಪ ತಗ್ಗಿದ್ದರಿಂದ ಬೆಲೆ ಏರಿಕೆ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಜನರು ಭರ್ಜರಿ ವ್ಯಾಪಾರ ಮಾಡಿದರು.

ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ಹಾಗಾಗಿ ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿ ಬೇರೆ ಊರುಗಳಿಂದ ಬಂದು ಹೂ, ಹಣ್ಣು , ಮತ್ತಿತರ ವಸ್ತುಗಳನ್ನು ಮಾರಾಟಕ್ಕಿಟ್ಟರೂ ವ್ಯಾಪಾರ ಮಾಡಲು ಆಗಲಿಲ್ಲ.

ಆದರೆ, ಸುಮಾರು 11ಗಂಟೆ ನಂತರ ವಾತಾವರಣ ತಿಳಿಯಾದ ಕಾರಣ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಶಿವಾಜಿನಗರ, ಆರ್‍ಎಂಸಿಯಾರ್ಡ್, ರಾಜಾಜಿನಗರ, ಮೈಸೂರು ರಸ್ತೆ, ಬನಶಂಕರಿ ಮಾರುಕಟ್ಟೆ, ಮಡಿವಾಳ, ಬಸವನಗುಡಿ, ಜಯನಗರ, ವಿಜಯನಗರ ಸೇರಿದಂತೆ ಮತ್ತಿತರ ಕಡೆಗಳ ಮಾರುಕಟ್ಟೆಗಳಲ್ಲಿ ಹೂ,ಹಣ್ಣು ಸೇರಿದಂತೆ ಮತ್ತಿತರ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬಿದ್ದರು. ಸಂಜೆ ಮತ್ತೆ ಮಳೆ ಬರಬಹುದೆಂದು ಬೆಳಗ್ಗೆಯೇ ಸಾರ್ವಜನಿಕರು ವ್ಯಾಪಾರದಲ್ಲಿ ತೊಡಗಿದ್ದರು.

ವರಮಹಾಲಕ್ಷ್ಮಿ ದೇವಿಯ ಅಲಂಕಾರಕ್ಕೆ ಮುಖವಾಡ, ಕೃತಕ ಆಭರಣ, ಬಳೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮಹಿಳೆಯರು ಕೊಂಡುಕೊಳ್ಳುತ್ತಿದ್ದದ್ದು ಅಲ್ಲಲ್ಲಿ ಕಂಡು ಬಂತು. ಹೂ, ಹಣ್ಣು, ತರಕಾರಿ, ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದರೂ ವಿಧಿಯಿಲ್ಲದೆ ಹಬ್ಬಕ್ಕಾಗಿ ಸಾರ್ವಜನಿಕರು ಖರೀದಿಸಿದರು.

ಕನಕಾಂಬರ ಕೆಜಿಗೆ 2000ರೂ., ಗುಲಾಬಿ 800, ಸುಂಗದರಾಜ 100ರಿಂದ 220, ಸೇವಂತಿಗೆ ಒಂದು ಮಾರಿಗೆ 300ರಿಂದ 400ರೂ., ಸಂಪಿಗೆ 300, ಮಲ್ಲಿಗೆ 1000, ಮಾರಿಗೋಲ್ಡ್ ಕೆಜಿಗೆ 600ರಿಂದ 800ರೂ., ತಾವರೆ ಜತೆಗೆ 80ರಿಂದ 100, ಬಾಳೆಕಂದು ಜೋಡಿಗೆ 50ರಿಂದ 100, ತೆಂಗಿನಕಾಯಿ ಒಂದಕ್ಕೆ 25ರಿಂದ 30ರೂ., ಡೇರಾ ಹೂ ಒಂದಕ್ಕೆ 15ರಿಂದ 20ರೂ.ಇದ್ದರೆ ಹಣ್ಣಿನ ದರವೂ ಇದಕ್ಕೆ ಹೊರತೇನೂ ಅಲ್ಲ.

ಏಲಕ್ಕೆ ಬಾಳೆಹಣ್ಣು ಕೆಜಿಗೆ 100ರಿಂದ 130, ಸೇಬು 100ರಿಂದ 120, ಮುಸಂಬಿ 150ರಿಂದ 180, ಮರಸೇಬು 100ರೂ. ಸೇರಿದಂತೆ ಇತರೆ ಹಣ್ಣುಗಳ ಬೆಲೆಯೂ ಹಿಂದೆಂದಿಗಿಂತ ದುಬಾರಿಯಾಗಿದೆ.

ತರಕಾರಿ ಬದನೆಕಾಯಿ ಕೆಜಿಗೆ 40ರೂ., ಬಿಳಿ ಬದನೆ 50, ಡಬಲ್ ಬೀನ್ಸ್ 250ರೂ., ಬೀನ್ಸ್ 60ರಿಂದ 80ರೂ., ದಪ್ಪ ಮೆಣಸಿನಕಾಯಿ 80, ಹಸಿ ಮೆಣಸಿನಕಾಯಿ 100ರೂ., ಎಲೆಕೋಸು 60, ಟೊಮ್ಯಾಟೊ 30ರಿಂದ 50, ಹಸಿಶುಂಠಿ 100, ಕುಂಬಳಕಾಯಿ 40, ಸೌತೆಕಾಯಿ ಒಂದಕ್ಕೆ 10ರೂ. ಸೇರಿದಂತೆ ವಿವಿಧ ತರಕಾರಿಗಳ ಬೆಲೆಯೂ ಗಗನಕ್ಕೇರಿವೆ.

ಹಬ್ಬಹರಿದಿನಗಳನ್ನು ಕೈ ಬಿಡಕ್ಕಾಗಲ್ಲ, ಏನ್ ಮಾಡೋದು ಬೆಲೆ ಏರಿದ್ರೂ, ಇಳಿದ್ರೂ ಸಾಮಾನುಗಳನ್ನು ಖರೀದಿಸಲೇಬೇಕು. ಹಾಗಾಗಿ ಮಳೆ ಸ್ವಲ್ಪ ಕಡಿಮೆ ಇದ್ದದ್ದರಿಂದ ಮಧ್ಯಾಹ್ನವೇ ವ್ಯಾಪಾರಕ್ಕೆ ಬಂದ್ವಿ ಎನ್ನುತ್ತಾರೆ ಸಾರ್ವಜನಿಕರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ