ಬೆಂಗಳೂರು, ಆ.8- ನಗರದ ಲಾಲ್‍ಬಾಗ್‍ನಲ್ಲಿ ನಾಳೆಯಿಂದ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಪೊಲೀಸ್ ಇಲಾಖೆಯ ಸಲಹೆಯಂತೆ ಪ್ರವಾಸಿಗರಿಗೆ ವಿಶೇಷ ಭದ್ರತೆ ನೀಡುವ ದೃಷ್ಟಿಯಿಂದ ಅಗತ್ಯ ರಕ್ಷಣಾ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಲಾಲ್‍ಬಾಗ್‍ನ ಪ್ರವೇಶದ್ವಾರ, ಗಾಜಿನ ಮನೆ ಹಾಗೂ ಸಸ್ಯತೋಟದ ವಿವಿಧ ಆಯ್ದ ಪ್ರಮುಖ ಸ್ಥಳಗಳಲ್ಲಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಸ್, ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ಸ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಅಲ್ಲದೆ, ಲಾಲ್‍ಬಾಗ್‍ನ ಗಾಜಿನ ಮನೆಯ ಬಳಿ ಪ್ರತ್ಯೇಕ ಪೊಲೀಸ್ ಚೌಕಿಯನ್ನು ಸಹ ತೆರೆಯಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಸುಸಜ್ಜಿತ ಅಗ್ನಿಶಾಮಕ ವಾಹನ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೊಳಗೊಂಡ ಐದು ಆ್ಯಂಬುಲೆನ್ಸ್ ವಾಹನಗಳನ್ನು ಲಾಲ್‍ಬಾಗ್‍ನ ನಾಲ್ಕು ಪ್ರವೇಶದ್ವಾರಗಳ ಬಳಿ ನಿಲುಗಡೆ ಮಾಡಲಾಗಿದೆ.
ಲಾಲ್‍ಬಾಗ್‍ನ ಆಯ್ದ ನಾಲ್ಕು ಪ್ರದೇಶಗಳಲ್ಲಿ ದಿನಿ ಸಿನಿ ಕ್ರಿಯೇಷನ್ಸ್ ವತಿಯಿಂದ ಫೀಡಿಂಗ್ ರೂಮ್‍ಗಳು, ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ.
ಲಾಲ್‍ಬಾಗ್‍ನ ಕೆರೆ ಬಳಿ ಮುನ್ನೆಚ್ಚರಿಕೆಯಾಗಿ ಈಜು ಪರಿಣಿತರನ್ನು ನಿಯೋಜಿಸಲಾಗಿದೆ. ಅಲ್ಲದೆ, ಈ ಬಾರಿ ವಿಶೇಷವಾಗಿ ರಜಾ ದಿನಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.