ರಾಜ್ಯದಲ್ಲಿ ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ

ಬೆಂಗಳೂರು, ಆ.8- ಉತ್ತರ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕುಂಭದ್ರೋಣ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದರೆ, ದಕ್ಷಿಣ ಕರ್ನಾಟಕ, ಬಯಲುಸೀಮೆ ಸೇರಿದಂತೆ 32 ತಾಲೂಕುಗಳ 177 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಇದರಿಂದ ರಾಜ್ಯದಲ್ಲಿ ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಎನ್ನುವಂತಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕಳೆದ ಒಂದು ವಾರದಲ್ಲಿ ರಾಜ್ಯದ 22 ಜಿಲ್ಲೆಗಳ 124 ತಾಲ್ಲೂಕುಗಳ 498 ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 20 ತಾಲೂಕುಗಳ 72 ಹೋಬಳಿಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ.

ಮುಂಗಾರು ಆರಂಭವಾದ ಜೂನ್ 1ರಿಂದ ಇದುವರೆಗೂ ರಾಜ್ಯದ 43 ತಾಲೂಕುಗಳ 232 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಬರದ ಛಾಯೆ ಆವರಿಸಿದೆ. ಏಳು ಜಿಲ್ಲೆಗಳ 56 ತಾಲ್ಲೂಕುಗಳ 216 ಹೋಬಳಿಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

16 ಜಿಲ್ಲೆಗಳ 77 ತಾಲ್ಲೂಕಿನ 303 ಹೋಬಳಿಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.37, ರಾಮನಗರ ಶೇ.18, ಕೋಲಾರ ಶೇ.27, ಚಿಕ್ಕಬಳ್ಳಾಪುರ ಶೇ.11, ಬೆಂ.ಗ್ರಾಮಾಂತರ ಶೇ.9, ದಾವಣಗೆರೆ ಶೇ.21, ಚಾಮರಾಜನಗರ ಶೇ.7, ಬೀದರ್ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ.

ಬೆಂಗಳೂರು ನಗರ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಶೇ.24 ರಿಂದ ಶೇ.57ರಷ್ಟು ಕೊರತೆಯಾಗಿದ್ದರೆ ಬೆಂ.ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕುಗಳಲ್ಲೂ ಮಳೆ ಕೊರತೆ ಕಂಡುಬಂದಿದೆ.

ಹಾಗೆಯೇ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೀದರ್ ಜಿಲ್ಲೆಗಳಲ್ಲೂ ಮಳೆ ಕೊರತೆ ಕಂಡುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ