ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಪರ್ಕವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ-ಶಾಸಕ ರೇಣುಕಾಚಾರ್ಯ

ಬೆಂಗಳೂರು,ಆ.8- ರಾಜ್ಯದ ಉತ್ತರಕರ್ನಾಟಕ, ಕರಾವಳಿ ತೀರಾ ಪ್ರದೇಶ, ಮಲೆನಾಡು, ಮಧ್ಯಕರ್ನಾಟಕ ಸೇರಿದಂತೆ ಪ್ರವಾಹ ಉಂಟಾಗಿರುವ ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಪರ್ಕವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಪ್ರತಿಪಕ್ಷಗಳು ಇಂತಹ ವಿಷಯದಲ್ಲೂ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಉಂಟಾದ ಎರಡೇ ದಿನದಲ್ಲೇ ಯಡಿಯೂರಪ್ಪನವರು ರಾಯಚೂರು, ವಿಜಾಪುರ, ಯಾದಗಿರಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ತುರ್ತು ಪರಿಹಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ನಿನ್ನೆ ದೆಹಲಿ ಪ್ರವಾಸ ಮುಗಿಸಿಕೊಂಡು ಮರು ಕ್ಷಣವೇ ಬೆಳಗಾವಿ ತೆರಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಕುರಿತಂತೆ ಮಾಹಿತಿ ಪಡೆದರು. ಸುರಿಯುವ ಮಳೆ, ಪ್ರವಾಹ ಉಂಟಾಗಿದ್ದರೂ ಯಾವುದನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳು ಸಂತ್ರಸ್ತರ ಅಳಲು ಆಲಿಸುತ್ತಿದ್ದಾರೆ. ಆದರೆ ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಕೂಡಲೇ ಯಡಿಯೂರಪ್ಪನವರು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಪ್ರತಿ ಕ್ಷಣವೂ ಅಧಿಕಾರಿಗಳ ಜೊತೆ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಾಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರವು ಸಹ ಎಲ್ಲ ರೀತಿಯ ನೆರವು ನೀಡಲು ಮುಂದೆ ಬಂದಿದೆ ಎಂದು ಹೇಳಿದರು.

ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಸಿಇಒ ಸೇರಿ ಎಲ್ಲ ಹಂತದ ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಕೂಡ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಡೆ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಅಧಿಕಾರ ಕಳೆದುಕೊಂಡು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರೇ ಪ್ರವಾಹ ಪರಿಸ್ಥಿತಿ ನಿಭಾಯಿಸುವಂತೆ ಸಲಹೆ ಮಾಡಿದ್ದಾರೆ. ಯಡಿಯೂರಪ್ಪನವರು ಕೂಡ ಒಂದು ಕ್ಷಣವೂ ಕೂಡ ವ್ಯರ್ಥ ಮಾಡದೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಹ ಉಂಟಾದ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಕಾರಕ್ಕೆ ಅಗತ್ಯವಾದ ಸಲಹೆ, ಸಹಕಾರ, ಮಾರ್ಗದರ್ಶನ ನೀಡಬೇಕು. ಅದನ್ನು ಬಿಟ್ಟು ವಿನಾಕಾರಣ ಸಂಕಷ್ಟದ ಪರಿಸ್ಥಿತಿಯನ್ನೇ ರಾಜಕೀಯ ಲಾಭ ಮಾಡಿಕೊಳ್ಳಬಾರದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬರಪೀಡಿತ ಜಿಲ್ಲೆಗಳಿಗೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದರು, ಯಾವ ರೀತಿಯ ಪರಿಹಾರ ಕಾರ್ಯ ನಿರ್ವಹಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಧಿಕಾರ ಉಳಿಸಿಕೊಳ್ಳಲು ದೇವಸ್ಥಾನ ಸುತ್ತಿದ್ದೇ ಅವರ ಸಾಧನೆ. ಇಂಥವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆಯೂ ರಾಜ್ಯದ ನಾನಾ ಕಡೆ ಬರಗಾಲ ಮತ್ತು ಪ್ರವಾಹ ಉಂಟಾಗಿತ್ತು. ಇವು ಕೂಡ ಯಾವ ಪರಿಸ್ಥಿತಿಯನ್ನು ನಿಭಾಯಿಸಿದ್ದರು ಎಂಬುದು ಗೊತ್ತಿದೆ. ನಿಮ್ಮಿಂದ ಬಿಜೆಪಿ ಇಲ್ಲವೇ ಯಡಿಯೂರಪ್ಪನವರು ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಸಾಧ್ಯವಾದರೆ ಸಹಕಾರ ನೀಡಿ , ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಸಂಕಷ್ಟದಲ್ಲಿರುವ ಜನರ ನೆರವಿಗೆ ಒಕ್ಕೋರಲಿನಿಂದ ನೆರವಾಗೋಣ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ