ಬೆಂಗಳೂರು/ಬೆಳಗಾವಿ/ಧಾರವಾಡ/ಗುಲ್ಬರ್ಗ, ಆ.8- ಅರ್ಧ ರಾಜ್ಯ ನೀರಿನಲ್ಲಿ ಮುಳುಗಡೆಯಾಗಿದೆ. ಉತ್ತರ ಕರ್ನಾಟಕದವರ ಬದುಕು ನರಕ ಸದೃಶವಾಗಿದೆ.
ಪ್ರವಾಹ, ನಿಲ್ಲದ ಮಳೆಯಿಂದಾಗಿ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಹೆಕ್ಟೇರ್‍ನಲ್ಲಿದ್ದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಸಾವು-ನೋವಿನ ಸಂಖ್ಯೆ ಏರುತ್ತಲೇ ಇದೆ. ಮುಂಜಾಗ್ರತಾ ಕ್ರಮವಾಗಿ ಮತ್ತೆರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನೂ ಮಳೆ, ಪ್ರವಾಹ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಆತಂಕ, ಭೀತಿ ಹೆಚ್ಚಾಗತೊಡಗಿದೆ.
ಉತ್ತರ ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಹುಬ್ಬಳ್ಳಿ-ಮೀರಜ್, ಮೀರಜ್-ಕ್ಯಾಸಲ್‍ರಾಕ್ ರೈಲುಗಳ ಸಂಚಾರ ರದ್ದಾಗಿದ್ದು, ಹುಬ್ಬಳ್ಳಿಯಿಂದ ಕೊಲ್ಹಾಪುರ ಹಾಗೂ ಬೆಳಗಾವಿಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರ ನೆರವಿಗೆ ಸೇನಾಕಾರ್ಯ ಪಡೆ ದಾವಿಸಿದೆ. ಈಗಾಗಲೇ ಎನ್‍ಡಿಆರ್‍ಎಫ್ ಪಡೆ, ಅಗ್ನಿಶಾಮಕ ಪಡೆ ಕಾರ್ಯೋನ್ಮುಖವಾಗಿದ್ದು, ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಮಾಡುತ್ತಿವೆ.
ಬೆಳಗಾವಿಯ ರಾಮದುರ್ಗದಲ್ಲಿ ವೃದ್ಧ ಹಾಗೂ ಚಿಕ್ಕೋಡಿ ತಾಲೂಕಿನ ನಾಗರ ಮುನ್ನೊಳಿ ಪ್ರದೇಶದಲ್ಲಿ ಬಾಲಕಿ ಶಿಲ್ಪಾ (10) ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಎನ್‍ಆರ್ ಪುರ ತಾಲೂಕಿನ ಮಾಳೂರು ದಿಣ್ಣೆ ಗ್ರಾಮದಲ್ಲಿ ಮಳೆ-ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದರೆ, ಮೂಡಿಗೆರೆ ತಾಲೂಕಿನ ಹೇಮಾವತಿ ನದಿ ನೀರಿನಲ್ಲಿ ಆಲೂರು ಗ್ರಾಮದ ಶ್ರೀವತ್ಸ (21) ಕಾಲುಜಾರಿ ಬಿದ್ದು ನದಿಯಲ್ಲಿ ಕೊಚ್ಚಿಹೋಗಿದ್ದಾರೆ.
ಯಾದಗಿರಿ ಜಿಲ್ಲೆ ಕೌಳೂರು ಗ್ರಾಮದಲ್ಲಿ ಭೀಮಾನದಿ ಪ್ರವಾಹದಲ್ಲಿ ತಮ್ಮನ ಎದುರೇ ಅಣ್ಣ ಕೊಚ್ಚಿ ಹೋಗಿದ್ದಾನೆ.
ರೆಡ್ಡಿ ಚಂದ್ರಪ್ಪ ಡೊಂಗೇರ (34) ತನ್ನ ತಮ್ಮನೊಂದಿಗೆ ಹೋಗುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದು, ಆತನನ್ನು ಉಳಿಸಿಕೊಳ್ಳಲು ತಮ್ಮ ಮಾಡಿದ ಪ್ರಯತ್ನ ವ್ಯರ್ಥವಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇತ್ರಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ಗಂಗಾ ಮರಕಾಲ್ತಿ (46) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆ ಕಬಲಾಪುರದ ತೋಟದ ಮನೆಯಲ್ಲಿ ಕಾಡಪ್ಪ ರತ್ನವ್ವ ದಂಪತಿ ಸಿಲುಕಿದ್ದು, ಮನೆ ಕೊಚ್ಚಿಹೋದ ಪರಿಣಾಮ ಕಳೆದ ಮೂರು ದಿನಗಳಿಂದ ಮಾವಿನ ಮರದ ಮೇಲೆಯೇ ಆಶ್ರಯ ಪಡೆದು ಕುಳಿತಿದ್ದ ಅವರನ್ನುಇಂದು ರಕ್ಷಿಸಲಾಗಿದೆ.
ಸದಲಗದ ಗುಡ್ಡದಲ್ಲಿ 200 ಮಂದಿ ಸಿಲುಕಿಕೊಂಡಿದ್ದಾರೆ. ಎರಡು ಸೇನಾ ಹೆಲಿಕಾಪ್ಟರ್‍ಗಳ ನೆರವು ಪಡೆದು ಇವರನ್ನು ರಕ್ಷಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಆಲಮಟ್ಟಿ ಡ್ಯಾಮ್‍ನ ಹೊರಹರಿವು ಹೆಚ್ಚಾಗುತ್ತಿದ್ದಂತೆ ಸವದತ್ತಿಯ ದಾಸ್ತಿಕೊಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ-4 ಕೊಚ್ಚಿ ಹೋದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.
ಪ್ರವಾಹದ ಭೀತಿಯಿಂದ ಕುಟುಂಬ ಸಮೇತ ಜನ ಊರು ಖಾಲಿ ಮಾಡುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಮುಂತಾದೆಡೆ ಆಸ್ಪತ್ರೆಗಳಿಗೆ ನೀರು ನುಗ್ಗಿದ ಪರಿಣಾಮ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೋಟ್ ಮೂಲಕ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗುಲ್ಬರ್ಗ, ರಾಯಚೂರು, ಹುಬ್ಬಳ್ಳಿ ಪ್ರದೇಶಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ಮಹಾರಾಷ್ಟ್ರದಿಂದ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ನೀರಿನಿಂದ ಹಳ್ಳ-ಕೊಳ್ಳ, ಕೆರೆ-ಕಟ್ಟೆ ಎಲ್ಲವೂ ಭರ್ತಿಯಾಗಿ ನೀರು ಹರಿದು ಸಾವಿರಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ.
ಸಾವಿರಾರು ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಿದರೂ ನಿರಾಶ್ರಿತ ಕೇಂದ್ರಗಳಿಗೂ ನೀರು ನುಗ್ಗಿ ಅಲ್ಲಿರುವವರಲ್ಲೂ ಆತಂಕ ಎದುರಾಗಿದೆ.
ಬೆಳಗಾವಿ, ವಿಜಯಪುರದ ಹಲವು ನಿರಾಶ್ರಿತ ಕೇಂದ್ರಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿಂದ ನಿರಾಶ್ರಿತರನ್ನು ಹರಸಾಹಸ ಪಟ್ಟು ಬೇರೆಡೆಗೆ ಸ್ಥಳಾಂತರಿಸಲಾಯಿತು.
ಧಾರವಾಡ ಜಿಲ್ಲೆ ನವಲಗುಂದ, ಸವದತ್ತಿ ತಾಲೂಕಿನ 29 ಹಳ್ಳಿಗಳ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ತಾಲೂಕಿನ ರಾಯನಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಎಂಬುವವರಿಗೆ ಸೇರಿದ ಮನೆ ಕುಸಿದುಬಿದ್ದಿದೆ. ರಣಭೀಕರ ಮಳೆಯಿಂದ ಸುಮಾರು 800ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರು, ಬಂಡಿವಾಡ, ನಾಗರಳ್ಳಿ ಗ್ರಾಮಕ್ಕೆ ಬೆಣ್ಣೆಹಳ್ಳದ ನೀರು ನುಗ್ಗಿದೆ. ಹುಬ್ಬಳ್ಳಿಯ ಹೈಟೆಕ್ ಕೋರ್ಟ್ ಮುಳುಗಡೆಯಾಗಿದೆ. ಉತ್ತರ ಕನ್ನಡ, ಶಿರಸಿಯಲ್ಲೂ ಭಾರೀ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.
ಇತ್ತ ಹಾಸನ, ಶಿವಮೊಗ್ಗ, ಮಡಿಕೇರಿ ಮುಂತಾದೆಡೆ ವರ್ಷಧಾರೆ ಮುಂದುವರಿದಿದ್ದು, ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಸಕಲೇಶಪುರ ಪಟ್ಟಣದ ಹೇಮಾವತಿ ಹೊಳೆ, ಶಿವಮೊಗ್ಗದ ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚಾರ್ಮುಡಿ ಘಾಟ್ ಮಾರ್ಗದಲ್ಲಿ ಗುಡ್ಡಕುಸಿತ ಮುಂದುವರಿದ ಪರಿಣಾಮ ಎರಡು ದಿನಗಳ ಕಾಲ ಆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ಮಳೆ-ಗಾಳಿ ಹೊಡೆತಕ್ಕೆ ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ವ್ಯತ್ಯಯವಾಗಿದೆ. ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಬೇರೆ ಬೇರೆ ಊರುಗಳಿಂದ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಭದ್ರಾನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಹಾಸನ ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ಆರು ತಾಲೂಕುಗಳಲ್ಲಿ ರಜೆ ಘೋಷಿಸಲಾಗಿದೆ. ಹೊಳೆಮಲ್ಲೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದೆ.
ಸಹಾಯಕ್ಕಾಗಿ ನಿಯಂತ್ರಣ ಕೊಠಡಿ: ಬೆಳಗಾವಿ ಕಂಟ್ರೋಲ್ ರೂಂ: 0831-2407290, ವಿಜಯಪುರ: 08352-221261, ಬಾಗಲಕೋಟೆ: 08354-236240, ರಾಯಚೂರು: 08532-226383, ಯಾದಗಿರಿ: 08473-253771, ಶಿವಮೊಗ್ಗ: 08182-271101, 08182-267226, ದಕ್ಷಿಣ ಕನ್ನಡ: 0824-2442590, ಉಡುಪಿ: 0820-2574802, ಉತ್ತರ ಕನ್ನಡ: 08328-229857, ಕೊಡಗು: 08272- 221077, ಹಾಸನ: 08172- 261111, ಚಿಕ್ಕಮಗಳೂರು: 08262- 238990.