ಬೆಂಗಳೂರು,ಆ.5- ಒಂದೆಡೆ ಪ್ರತಿಪಕ್ಷಗಳ ಟೀಕೆ ಮತ್ತೊಂದೆಡೆ ಆಕಾಂಕ್ಷಿಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ನವದೆಹಲಿಗೆ ತೆರಳಲಿದ್ದಾರೆ.
ಎರಡು ದಿನಗಳ ಕಾಲ ನವದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾರ್ಯಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುವರು.
ಪ್ರಮುಖವಾಗಿ ನಾಳೆ ಕರ್ನಾಟಕ ಭವನದಲ್ಲಿ ಯಡಿಯೂರಪ್ಪ ರಾಜ್ಯ ಸಂಸದರ ಸಭೆಯನ್ನು ಆಯೋಜಿಸಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್, ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಪಾಲ್ಗೊಳ್ಳುವರು.
ಮಹದಾಯಿ ನದಿನೀರು ಯೋಜನೆ, ಮೇಕೆದಾಟು, ಕುಡಿಯುವ ನೀರು ಯೋಜನೆ, ಕಾವೇರಿ ಜಲವಿವಾದ ಇತ್ಯರ್ಥ, ರೈಲ್ವೆ, ಇಂಧನ, ರಕ್ಷಣೆ, ನೀರಾವರಿ, ಕಲಿದ್ದಲು ಸೇರಿದಂತೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಸಚಿವರ ಮೇಲೆ ಒತ್ತಡ ಹಾಕುವಂತೆ ಬಿಎಸ್‍ವೈ ಸಂಸದರಿಗೆ ನಿರ್ದೇಶನ ನೀಡುವರು.
ಉತ್ತರ ಕರ್ನಾಟಕದ ಪ್ರಮುಖ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿನೀರು ವಿವಾದವನ್ನು ಅನುಷ್ಠಾನಗೊಳಿಸುವುದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಸಲಹೆ ಮಾಡಲಿದ್ದಾರೆ.
ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಅನುಷ್ಠಾನ, ರಾಜ್ಯಕ್ಕೆ ಅಗತ್ಯವಿರುವ ಕಲ್ಲಿದ್ದಲ್ಲು ಪೂರೈಕೆ, ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿರುವುದರಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆಯೂ ಹಣಕಾಸು ಸಚಿವರಿಗೆ ಮನವಿ ಮಾಡುವರು.
ಅಭಿನಂದನೆ:
ಇನ್ನು ಯಡಿಯೂರಪ್ಪ ತಮ್ಮ ಪ್ರವಾಸದ ಸಂದರ್ಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಲಿದ್ದಾರೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಿ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ರಾಜ್ಯದ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುವರು.
ಸಂಪುಟ ವಿಸ್ತರಣೆಗೆ ಅನುಮತಿ:
ಯಡಿಯೂರಪ್ಪ ದೆಹಲಿ ಭೇಟಿ ಸಂದರ್ಭದಲ್ಲಿ ಕೇಂದ್ರ ವರಿಷ್ಠರಿಂದ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವಾರ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಸುಗಮವಾಗಿ ನಡೆಯಲು ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆಯೂ ಮನವಿ ಮಾಡುವರು.
ಸಂಪುಟ ವಿಸ್ತರಣೆ ಮಾಡುವ ಅಗತ್ಯತೆಯನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದು, ಮೊದಲ ಹಂತದಲ್ಲಿ ಯಾರ್ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಎಷ್ಟು ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಯಡಿಯೂರಪ್ಪ ದೆಹಲಿಗೆ ತೆರಳಿರುವುದರಿಂದ ಸಚಿವ ಸ್ಥಾನ ಆಕಾಂಕ್ಷಿಗಳು ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.ಮೂಲಗಳ ಪ್ರಕಾರ ಈ ವಾರದ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.