ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ಹಿನ್ನಲೆ-ಕರ್ನಾಟಕ ಭವನದಲ್ಲಿ ನಡೆಯಲಿರುವ ಸಂಸದರ ಸಭೆ

ಬೆಂಗಳೂರು,ಆ.5- ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆ ದೆಹಲಿಯ ಪಂಚತಾರಾ ಹೋಟೆಲ್‍ನಲ್ಲಿ ನಡೆಯಬೇಕಾಗಿದ್ದ ಸಂಸದರ ಸಭೆಯನ್ನು ರದ್ದುಪಡಿಸಲಾಗಿದ್ದು ಕರ್ನಾಟಕ ಭವನದಲ್ಲಿ ನಡೆಯಲಿದೆ.

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರ ಸಭೆಯನ್ನು ನವದೆಹಲಿಯ ಲೀಲಾ ಪ್ಯಾಲೇಸ್‍ನಲ್ಲಿ ಆಯೋಜಿಸಿದ್ದರು.
28 ಸಂಸದರು, ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 200 ಮಂದಿಗೆ ಲೀಲಾ ಪ್ಯಾಲೇಸ್‍ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.

ರಾಜ್ಯದಲ್ಲಿ ಒಂದು ಕಡೆ ಬರಗಾಲ ಮತ್ತೊಂದು ಕಡೆ ಪ್ರವಾಹ ಉಂಟಾಗಿ ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಚತಾರಾ ಹೋಟೆಲ್‍ನಲ್ಲಿ ಸಂಸದರ ಸಭೆಯನ್ನು ಆಯೋಜಿಸುವ ಅಗತ್ಯವಾದರೂ ಏನಿತ್ತೆಂದು ಕೆಲ ಸಂಸದರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು.
ಎರಡೂವರೆ ಗಂಟೆ ನಡೆಯಲಿರುವ ಸಭೆಗೆ 25 ಲಕ್ಷ ಖರ್ಚು ಮಾಡುವ ಅಗತ್ಯವಾದರೂ ಏನಿದೆ?ಕರ್ನಾಟಕ ಭವನದಲ್ಲಿ ಸಭೆ ನಡೆಸಬಹುದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಇದರಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಲೀಲಾ ಪ್ಯಾಲೇಸ್‍ನಲ್ಲಿ ನಡೆಯಬೇಕಾಗಿದ್ದ ಸಂಸದರ ಸಭೆಯನ್ನು ರದ್ದುಪಡಿಸಿ ನವದೆಹಲಿಯ ಕರ್ನಾಟಕದ ಭವನದಲ್ಲಿ ಸಭೆಯನ್ನು ಆಯೋಜಿಸುವಂತೆ ಸೂಚಿಸಿದ್ದಾರೆ.

ನಾಳೆ ಸಂಜೆ ಸಭೆ ನಡೆಯಲಿದ್ದು, ಪ್ರಮುಖವಾಗಿ ನೆನೆಗುದಿಗೆ ಬಿದ್ದಿರುವ ಕೇಂದ್ರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು, ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಗೂ ರಾಜ್ಯದ ನೆಲಜಲ, ಭಾಷೆ ಯಾವುದೇ ವಿಷಯದಲ್ಲಿ ಸಂಸತ್‍ನ ಉಭಯ ಸದನಗಳಲ್ಲೂ ಪಕ್ಷಬೇಧ ಮರೆತು ಹೋರಾಟ ಮಾಡುವಂತೆ ಸಂಸದರಿಗೆ ಬಿಎಸ್‍ವೈ ಕಿವಿಮಾತು ಹೇಳುವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ