ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಆ.5-ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು.

ಬೆಳಗ್ಗೆ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿಯ ಜಿಂದಾಲ್‍ಗೆ ತೆರಳಿದ ಬಿಎಸ್‍ವೈ ನಂತರ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿ ಮಾಹಿತಿ ಪಡೆದರು.

ಯಡಿಯೂರಪ್ಪನವರೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಸಾಥ್ ನೀಡಿದರು. ಮೊದಲು ರಾಯಚೂರಿನಿಂದ ಆರಂಭವಾದ ವೈಮಾನಿಕ ಸಮೀಕ್ಷೆ ಜಿಲ್ಲೆಯ ನಾನಾ ಕಡೆ ಮಳೆಯಿಂದ ಕೊಚ್ಚಿ ಹೋಗಿರುವ ರೈತರ ಬೆಳೆಗಳು, ಕುಸಿದು ಬಿದ್ದಿರುವ ಮನೆಗಳು, ತುಂಬಿ ಹರಿಯುತ್ತಿರುವ ಜಲಾಶಯಗಳು, ನದಿಗಳು, ಕೆರೆಗಳು, ಹಳ್ಳಕೊಳ್ಳಗಳನ್ನು ವೀಕ್ಷಣೆ ಮಾಡಿದರು.

ಇದೇ ವೇಳೆ ಯಡಿಯೂರಪ್ಪ ನಿರಾಶ್ರಿತರ ತಾಣಗಳಿಗೆ ಭೇಟಿ ನೀಡಿ ಜಿಲ್ಲಾಡಳಿತ ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಿದರು.
ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಬೇಕು, ಯಾವುದೇ ಕಾರಣಕ್ಕೂ ಸರ್ಕಾರಿ ಅಧಿಕಾರಿಗಳು ರಜೆ ತೆಗೆದುಕೊಳ್ಳಬಾರದು, ನಿರಾಶ್ರಿತರಿಗೆ ಅಗತ್ಯ ನೆರವು ಒದಗಿಸಬೇಕು, ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಬೇಕು. ಎಷ್ಟು ಹಣ ಖರ್ಚಾದರೂ ಸರಿಯೇ ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು.
ರಾಯಚೂರು ಸಮೀಕ್ಷೆ ಮುಗಿದ ಬಳಿಕ ಯಡಿಯೂರಪ್ಪ, ಬಾಗಲಕೋಟೆ, ಯಾದಗಿರಿ ಹಾಗೂ ವಿಜಾಪುರ ಜಿಲ್ಲೆಗಳಿಗೂ ವೈಮಾನಿಕ ಸಮೀಕ್ಷೆ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ