ತಡೆ ಹಿಡಿದಿರುವ ಬಜೆಟ್‍ಗೆ ಅನುಮತಿ ನೀಡುವಂತೆ ಸಿಎಂಗೆ ಮೇಯರ್ ಮನವಿ

ಬೆಂಗಳೂರು,ಆ.5- ತಡೆಹಿಡಿದಿರುವ ಬಿಬಿಎಂಪಿ ಬಜೆಟ್‍ಗೆ ತಕ್ಷಣವೇ ಅನುಮತಿ ನೀಡಬೇಕೆಂದು ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕೆ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು.
ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಬಿಎಸ್‍ವೈ ಅವರನ್ನು ಭೇಟಿ ಮಾಡಿದ ಗಂಗಾಂಬಿಕೆ, ತಡೆ ಹಿಡಿದಿರುವ ಬಜೆಟ್‍ಗೆ ಅನುಮತಿ ನೀಡದಿದ್ದರೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜಾಬ್ ಕೋಡ್ ತಡೆ ಹಿಡಿಯದಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸುವಂತೆ ಮನವಿ ಮಾಡಿದರು.

ಪ್ರಸಕ್ತ ಸಾಲಿನ ಬಜೆಟ್‍ನ್ನು ತಡೆಹಿಡಿದಿರುವುದರಿಂದ ನಗರದಲ್ಲಿ ಕಾಮಗಾರಿ ಹಂತದಲ್ಲಿರುವ ಕೆಲಸಗಳು ಅರ್ಧಕ್ಕೆ ನಿಲ್ಲುತ್ತವೆ. ವೈಟ್ ಟ್ಯಾಪಿಂಗ್, ರಸ್ತೆಗಳ ಅಗಲೀಕರಣ, ಫ್ಲೈಓವರ್ ನಿರ್ಮಾಣ, ರಾಜಕಾಲುವೆ ಹೂಳುತ್ತೆವುದು, ಚರಂಡಿಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದು, ಬಿಬಿಎಂಪಿ ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಿಲ್ಲ ಎಂಬುದನ್ನು ಬಿಎಸ್‍ವೈಗೆ ಮನವರಿಕೆ ಮಾಡಿದ್ದಾರೆ.
ಯಾವ ಕಾರಣಕ್ಕಾಗಿ ಬಜೆಟ್ ತಡೆಹಿಡಿಯಲಾಗಿದೆ ಎಂಬುದು ತಿಳಿದಿಲ್ಲ. ಕೂಡಲೇ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅನುಮೋದನೆ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಈ ತಿಂಗಳು ಅಧಿಕಾರಿಗಳಿಗೆ ವೇತನ ಹಾಗೂ ಅಭಿವೃದ್ದಿ ಕಾರ್ಯಗಳಿಗೂ ನಯಾಪೈಸೆ ಹಣ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮೇಯರ್ ಅವರ ಮನವಿಯನ್ನು ಸಹನೆಯಿಂದಲೇ ಆಲಿಸಿದ ಯಡಿಯೂರಪ್ಪ ನಾನು ಯಾವ ದುರುದ್ದೇಶ ಇಟ್ಟುಕೊಂಡು ಬಿಬಿಎಂಪಿ ಬಜೆಟ್ ತಡೆ ಹಿಡಿದಿಲ್ಲ.
ವೈಟ್ ಟ್ಯಾಪಿಂಗ್ ಹಾಗೂ ಕಾಮಗಾರಿ ಹೆಸರಿನಲ್ಲಿ ನೂರಾರು ಕೋಟಿ ಹಣ ಲೂಟಿಯಾಗುತ್ತಿದೆ. ಅಧಿಕಾರಿಗಳು ನಿಮ್ಮನ್ನು ದಿಕ್ಕು ತಪ್ಪಿಸಿ ಭಾರೀ ಪ್ರಮಾಣದ ಪ್ರಚಾರ ನಡೆಸುತ್ತಿದ್ದಾರೆ.ರಾಜಕಾಲುವೆ ಹೂಳೆತ್ತುವುದು ಹಾಗೂ ಗುಂಡಿ ಮುಚ್ಚುವುದರಲ್ಲೇ ನೂರಾರು ಕೋಟಿ ಅವ್ಯವಹಾರವಾಗಿರುವುದರ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬಜೆಟ್‍ನ್ನು ನಾನು ತಡೆಹಿಡಿದಿದ್ದೇನೆ ಎಂದು ಸಮರ್ಥಿಸಿಕೊಂಡರು.
ನಗರದಲ್ಲಿ ತ್ಯಾಜ್ಯ ವಸ್ತು ವಿಲೇವಾರಿಯಾಗದ ಕಾರಣ ಎಲ್ಲೆಂದರಲ್ಲಿ ಕಸದ ರಾಶಿ ಎದ್ದು ಕಾಣುತ್ತದೆ.ಇದರಿಂದ ನಾಗರಿಕರು ಕೂಡ ಸಮಸ್ಯೆ ಎದುರಿಸುವಂತಾಗಿದೆ.ಪದೇ ಪದೇ ಈ ಸಮಸ್ಯೆ ಏಕೆ ಉಂಟಾಗುತ್ತದೆ ಎಂಬುದು ತಿಳಿದಿಲ್ಲ.

ನಾನು ಬುಧವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಲಿದ್ದೇನೆ. ಅಷ್ಟರೊಳಗೆ ನಗರದ ಎಲ್ಲಿಯೂ ಕಸ ಕಾಣಬಾರದು, ಏನೇ ಸಮಸ್ಯೆ ಇದ್ದರೂ ನಿವಾರಿಸಿ ತ್ಯಾಜ್ಯ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕೆಂದು ಮೇಯರ್‍ಗೆ ಯಡಿಯೂರಪ್ಪ ಸೂಚಿಸಿದ್ದಾರೆ.

ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಬಜೆಟ್‍ಗೆ ಅನುಮೋದನೆ ದೊರಕಿಸಿಕೊಡಲಾಗುವುದು. ನಾನು ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಪಡಿಸಲು ತಡೆ ಹಿಡಿದಿಲ್ಲ. ಭ್ರಷ್ಟಾಚಾರ ನಮ್ಮ ಕಣ್ಮುಂದೆ ನಡೆಯುತ್ತಿರುವಾಗ ಅದನ್ನು ಸಹಿಸುವುದಾದರು ಹೇಗೆ? ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚಿಸಿ ಬಜೆಟ್‍ಗೆ ಅನುಮೋದನೆ ದೊರಕಿಸಿಕೊಡುತ್ತೇನೆ ಎಂಬ ಆಶ್ವಾಸವನ್ನು ಬಿಎಸ್‍ವೈ ನೀಡಿದ್ದಾರೆ.

ಇದೇ ವೇಳೆ ಜೆಡಿಎಸ್‍ನಿಂದ ಅನರ್ಹಗೊಂಡಿರುವ ಮಹಾಲಕ್ಷ್ಮಿ ಲೇಔಟ್‍ನ ಮಾಜಿ ಶಾಸಕ ಗೋಪಾಲಯ್ಯ ಹಾಗೂ ಅವರ ಪತ್ನಿ ಹೇಮಲತಾ ಅವರು ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಬೆಂಗಳೂರುನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡ ಆಗಮಿಸಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ