ಹೈಕಮಾಂಡ್ ಅನುಮತಿ ನೀಡಿದ 24 ಗಂಟೆಯೊಳಗೆ ಸಂಪುಟ ರಚನೆ-ಸಿಎಂ ಯಡಿಯೂರಪ್ಪ

ಬೆಂಗಳೂರು, ಆ.4- ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿದರೆ 24 ಗಂಟೆಯೊಳಗೆ ಸಂಪುಟ ರಚನೆ ಮಾಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆಯಾಗದಿರುವುದಕ್ಕೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಹೈಕಮಾಂಡ್ ಆದೇಶ ಕೊಟ್ಟರೆ 24 ಗಂಟೆಯೊಳಗೆ ವಿಸ್ತರಣೆ ಮಾಡಲು ನಾನು ಸಿದ್ಧ.ಅಲ್ಲಿಯವರೆಗೂ ಸಂಪುಟ ರಚನೆ ಮಾಡಲು ಸಾಧ್ಯವಿಲ್ಲ. ದೆಹಲಿ ನಾಯಕರ ಅನುಮತಿ ನಂತರವೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ನಾನು ಯಾವುದೇ ಉತ್ತರ ಕೊಡುವುದಿಲ್ಲ.ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನಾಳೆ ಸಂಜೆ ದೆಹಲಿಗೆ ತೆರಳಲಿದ್ದು, ಮೂರು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಮತ್ತಿತರರನ್ನು ಭೇಟಿ ಮಾಡಲಿದ್ದೇನೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದೇನೆ. ಆಗ ಹೈಕಮಾಂಡ್ ಸಂಪುಟ ರಚನೆಗೆ ಗ್ರೀನ್ ಸಿಗ್ನ್‍ಲ್ ಕೊಟ್ಟರೆ 24 ಗಂಟೆಯೊಳಗೆ ಮಾಡಿ ಮುಗಿಸುತ್ತೇನೆ ಎಂದು ತಿಳಿಸಿದರು.

ಬಿಬಿಎಂಪಿ ಬಜೆಟ್‍ಗೆ ತಡೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಎಸ್‍ವೈ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದಕ್ಕೆ ತಡೆಹಿಡಿಯಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬೇಕಾಬಿಟ್ಟಿಯಲ್ಲಿ ಹಣ ದುಂದುವೆಚ್ಚವಾಗುತ್ತಿತ್ತು. ಹೀಗಾಗಿ ತಡೆಹಿಡಿಯಲಾಗಿದೆ ಎಂದು ಸಮರ್ಥಿಸಿಕೊಂಡರು.

ಅನವಗತ್ಯವಾಗಿ ಫುಟ್‍ಪಾತ್ ಕಿತ್ತು ರಿಪೇರಿಮಾಡುವ ಕೆಲಸ ಮಾಡುತ್ತಿದ್ದಾರೆ. ವೈಟ್ ಟಾಪಿಂಗ್‍ನಲ್ಲೂ ಅನಗತ್ಯ ದುಂದುವೆಚ್ಚ ನಡೆಯುತ್ತಿದೆ. ಬಿಬಿಎಂಪಿಯಲ್ಲಿ ಹಗಲು ಲೂಟಿ ನಡೆಯುತ್ತಿದ್ದು, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿರುವುದರಿಂದ ಬಜೆಟ್ ಅನುಮೋದನೆಗೆ ತಡೆನೀಡಲಾಗಿದೆ ಎಂದರು.

ನಗರದ ಅಭಿವೃದ್ಧಿ ಕಾರ್ಯ ನಿಲ್ಲಿಸಬೇಕು ಎಂಬ ಕಾರಣಕ್ಕೆ ಬಜೆಟ್ ತಡೆಹಿಡಿದಿಲ್ಲ. ಯಾವುದೇ ಅಂದಾಜು ಮಾಡಿ ಖರ್ಚು ಮಾಡಬೇಕು. ಆದರೆ ಬಿಬಿಎಂಪಿಯಲ್ಲಿ ಬೇಕಾಬಿಟ್ಟಿ ಲೂಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಬಜೆಟ್‍ಅನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ. ಅಧಿಕಾರಿಗಳಿಂದಲೂ ಮಾಹಿತಿ ಪಡೆಯಲಾಗುವುದು.ನಂತರವೇ ಇದಕ್ಕೆ ಅನುಮೋದನೆ ನೀಡುತ್ತೇನೆ ಎಂದು ಪುನರುಚ್ಚರಿಸಿದರು.

ನಾನು ಮೂರು ದಿನ ದೆಹಲಿಯಲ್ಲಿ ಇರುತ್ತೇನೆ. ಅಷ್ಟರೊಳಗೆ ನಗರದಲ್ಲಿ ವಿಲೇವಾರಿಯಾಗದೇ ಇರುವ ಕಸವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದೆಹಲಿಯಿಂದ ವಾಪಸ್ ಬರುವವ ವೇಳೆಗೆ ನಗರದ ಯಾವುದೇ ಭಾಗದಲ್ಲೂ ತ್ಯಾಜ್ಯ ಸಮಸ್ಯೆ ಇರಬಾರದು. ಒಂದು ವೇಳೆ ಕಸ ಇದ್ದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

ಮುಂದಿನ ವಾರ ನಾನೇ ನಗರದಾದ್ಯಂತ ಪರಿಶೀಲಿಸಿ ತ್ಯಾಜ್ಯ ವಿಲೇವಾರಿ ಸಮಸ್ಯೆ, ಕಾಲುವೆಗಳ ಹೂಳೆತ್ತುವುದು, ಮೂಲಭೂತ ಸೌಲಭ್ಯಗಳು ಕಲ್ಪಿಸುವುದು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ ಖುದ್ದು ಭೇಟಿ ನೀಡುವೆ ಎಂದರು.

ಅಧಿಕಾರಿಗಳಿಗೆ ಸೂಚನೆ:
ಮುಸ್ಲಿಂ ಜನಪ್ರತಿನಿಧಿಗಳು ಬರೆದಿರುವು ಪತ್ರಿಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬಕ್ರೀದ್, ಕ್ರಿಸ್‍ಮಸ್ ಅಥವಾ ಹಿಂದುಗಳ ಹಬ್ಬವೇ ಇರಲಿ ಯಾವುದೇ ಹಬ್ಬಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿ ಉಂಟು ಮಾಡಬಾರದು. ಅಧಿಕಾರಿಗಳು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಹಿಂದು ಯುವಕರ ಮೇಲೆ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಹಿಂದಿನ ಸರ್ಕಾರದಕ್ಕೆ ಅನಗತ್ಯವಾಗಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಶಾಸಕರು ಮಾಡಿಕೊಂಡ ಮನವಿ ಮೇರೆಗೆ ಹಿಂಪಡೆದಿದ್ದೇನೆ ಎಂದು ತಿಳಿಸಿದರು.

ನಾಳೆ ಪ್ರವಾಸ:
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಅನೇಕ ಕಡೆ ಜನರು ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಪ್ರವಾಸ ಮಾಡುವುದಾಗಿ ತಿಳಿಸಿದರು.

ಕೃಷ್ಣಾ ನಂದಿ ಪ್ರವಾಹದಿಂದಾಗಿ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಅನೇಕ ಹಳ್ಳಿಗಳು ಮುಳುಗಡೆಯಾಗಿವೆ. ಜನರಿಗೆ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 10 ಗಂಟೆ ಹೆಲಿಕಾಫ್ಟರ್‍ನಲ್ಲಿ ತೆರಳಿ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ಕೊಡುವೆ. ವಾತಾವರಣದ ಪರಿಸ್ಥಿತಿ ಸೂಕ್ತವಾಗಿದ್ದರೆ ವೈಮಾನಿಕ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಮನೆ ಕಳೆದುಕೊಂಡವರಿಗೆ ಶಾಲೆಗಳಲ್ಲಿ ವಸತಿ ಕಲ್ಪಿಸಲಾಗಿದೆ. ನಿರಾಶ್ರಿತರ ತಾಣಗಳನ್ನು ಅಗತ್ಯವಿರುವ ಕಡೆ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೊಟ್ಟಿರುವುದಾಗಿ ತಿಳಿಸಿದರು.

ಇದೇ ವೇಳೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‍ಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕೋಲಿ ಸಮಾಜದ ಮುಖಂಡರು ಯಡಿಯೂರಪ್ಪನವರಿಗೆ ಮನವಿ ಮಾಡಿದರು.

ಬಾಬುರಾವ್ ಚಿಂಚನಸೂರ್ ಅವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಬೇಕು. ಇದರಿಂದ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದಂತಾಗುತ್ತದೆ ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ