ಬೆಂಗಳೂರು, ಆ. 3- ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ವಿಳಂಭವನ್ನು ಪ್ರಶ್ನಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದೇನು ಪ್ರಜಾಪ್ರಭುತ್ವವೇ ಅಥವಾ ಏಕಚಕ್ರಾಧಿಪಥ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಟ್ವ್ ಮಾಡುವು ಮೂಲಕ ಟಾಂಗ್ ನೀಡಿರುವ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತೋರಿಸಿದ ಅತೀವ ಅವಸರವನ್ನು ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಏಕೆ ತೋರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಆಡಳಿತ ಯಂತ್ರ ಸ್ತಬ್ಧವಾಗಿದೆ.ಅತಿವೃಷ್ಟಿ, ಅನಾವೃಷ್ಟಿ ಪ್ರದೇಶಗಳ ಸಂತ್ರಸ್ತರಿಗೆ ಸ್ಪಂದಿಸಬೇಕಾದ ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಸಚಿವರುಗಳೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಆದ್ಯತೆ ಅಧಿಕಾರಿಗಳ ವರ್ಗಾವಣೆಗೋ ಅಥವಾ ಸಂಪುಟ ವಿಸ್ತರಣೆಗೋ ಎಂದು ಕಿಚಾಯಿಸಿರುವ ಸಿದ್ದರಾಮಯ್ಯ ವಿಶ್ವಾಸಮತ ಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳುಹಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಗಕ್ಕೆ ಸಚಿವರಿಲ್ಲದೆ ಏಕವ್ಯಕ್ತಿ ಸಂಪುಟದಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೆ ಎಂದು ಅವರು ಕುಟುಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಳಂಭದ ಬಗ್ಗೆ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮುಗಿಬೀಳಲಾರಂಭಿಸಿವೆ. ಕೆಪಿಸಿಸಿ ಮತ್ತು ಜೆಡಿಎಸ್ ಪಕ್ಷಗಳು ಟ್ವಿಟರ್ ಮೂಲಕವೇ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡಿದ್ದವು. ಇಂದು ಸಿದ್ದರಾಮಯ್ಯ ಕೂಡ ಟಿಟ್ವರ್ನಲ್ಲಿ ಚಾಟಿ ಬೀಸಿದ್ದಾರೆ.