ಚಂದ್ರಯಾನ-2 ನೌಕೆಯ ಕಕ್ಷೆಯನ್ನು 4ನೇ ಬಾರಿ ಎತ್ತರಿಸುವ ಕಾರ್ಯ ಯಶಸ್ವಿ-ಇಸ್ರೋ

ಬೆಂಗಳೂರು, ಆ. 3- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡಾವಣೆ ಮಾಡಿದ ಚಂದ್ರಯಾನ-2 ನೌಕೆಯ ಕಕ್ಷೆಯನ್ನು 4ನೇ ಬಾರಿ ಎತ್ತರಿಸುವ ಕಾರ್ಯ ಯಶಸ್ವಿಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ನಡೆಯುತ್ತಿರುವುದು ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ..

ನಿನ್ನೆ ಮಧ್ಯಾಹ್ನ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಂತರಿಕ್ಷೆನೌಕೆಯಲ್ಲಿನ ಎಂಜಿನ್ ಅನ್ನು ಸಮರ್ಪಕ ರೀತಿಯಲ್ಲಿ ಚಾಲನೆ ಮಾಡಿ ಈ ಕಾರ್ಯಾಚರಣೆ ನಡೆಸಲಾಗಿದೆ.4ನೇ ಬಾರಿ ಕಕ್ಷೆಗೇರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ನೌಕೆಯ ಹಾದಿಗೆ ಕಣ್ಗಾವಲು ಇಡಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಇಸ್ರೊ ಹೇಳಿದೆ.ಈ ಕುರಿತ ಪೋಟೋ, ಮಾಹಿತಿಯನ್ನು ಇಸ್ರೋ ಟ್ವೀಟ್ ಮಾಡಿದೆ.

ಸುಮಾರು 4 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲೆ ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ ಒಳಗೊಂಡ 3,850 ಕಿ.ಜಿ ತೂಕದ ಚಂದ್ರಯಾನ-2 ನೌಕೆಯನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಒಟ್ಟು 15 ಬಾರಿ ಎತ್ತರಿಸುವ, ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಸರಿಪಡಿಸುವ ಕಾರ್ಯವನ್ನು ಇಸ್ರೋ ನಡೆಸಿದೆ.

ಮುಂದಿನ ಹಂತದ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ