ನವದೆಹಲಿ,ಆ.2– ಮಹತ್ವದ ತೀರ್ಪೂನ್ದರಲ್ಲಿ ಸುಪ್ರೀಂಕೋರ್ಟ್ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳಿಗೆ ಸಹಕರಿಸಲು ಆರೋಪಿಗಳ ಧ್ವನಿ ಮಾದರಿ(ವಾಯ್ಸ್ ಸ್ಯಾಂಪಲ್) ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ದಂಡಾಧಿಕಾರಿ(ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್-ಜೆಎಂ)ಗಳಿಗೆ ಇದೆ ಎಂದು ಪ್ರತಿಪಾದಿಸಿದೆ.
ಈ ಮೊದಲು ಇಂಥ ಪ್ರಕರಣಗಳ ತನಿಖೆ ನಡೆಸುವ ಸಂಸ್ಥೆಗಳಿಗೆ ಆರೋಪಿಗಳ ಧ್ವನಿ ಮಾದರಿಗಳನ್ನು ನೀಡುವಂತೆ ಆದೇಶಿಸುವ ಅಧಿಕಾರ ಜೆಎಂಗಳಿಗೆ ಇರಲಿಲ್ಲ. ಹೀಗಾಗಿ ಇದು ಮಹತ್ವದ ತೀರ್ಪು ಎನಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಇಂದು ಜೆಎಂಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಈ ಪ್ರಮುಖ ಆದೇಶ ನೀಡಿದೆ.
ಅಪರಾಧ ಪ್ರಕರಣಗಳಲ್ಲಿ ತನಿಖೆ ನಡೆಸುವ ಸಂಸ್ಥೆಗಳಿಗೆ ಸಹಕಾರ ನೀಡಲು ಧ್ವನಿ ಮಾದರಿಗಳನ್ನು ನೀಡಬೇಕೆಂದು ಆರೋಪಿಗಳು/ಅಪಾದಿತರಿಗೆ ನಿರ್ದೇಶನ ನೀಡುವ ಅಧಿಕಾರ ಅಪರಾಧ ಪ್ರಕ್ರಿಯಾ ಸಂಹಿತೆ(ಸಿಆರ್ಪಿಸಿ)ಯಲ್ಲಿ ತಿಳಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿತು.
ಆದಾಗ್ಯೂ ಭಾರತ ಸಂವಿಧಾನದಲ್ಲಿನ ವಿಧಿಗಳಲ್ಲಿನ ಅಂಶಗಳೊಂದಿಗೆ ವಿಶೇಷ ಅಧಿಕಾರ ಬಳಸಿ ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನ್ಯಾಯ ನಿರ್ಣಯಿಸಿದೆ ಎಂದು ಸಿಜೆಐ ರಂಜನ್ ಗೋಗಯ್ ತಿಳಿಸಿದರು.
ಹಿರಿಯ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಸಹ ಈ ಮಹತ್ವದ ತೀರ್ಪು ಹೊರಡಿಸಿದ ನ್ಯಾಯಪೀಠದಲ್ಲಿದ್ದರು.