ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮೂರನೇ ರಾಷ್ಟ್ರದ ಅಗತ್ಯವಿಲ್ಲ-ವಿದೇಶಾಂಗ ಸಚಿವ ಎಸ್.ಜೈಶಂಕರ್

ಬ್ಯಾಂಕಾಕ್, ಆ.2– ಕಾಶ್ಮೀರ ವಿವಾದವನ್ನು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಚರ್ಚೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಸ್ಪಷ್ಟೋಕ್ತಿ ಮೂಲಕ ಕಾಶ್ಮೀರ ವಿವಾದ ಇತ್ಯರ್ಥಗೊಳಿಸಲು ಮೂರನೇ ರಾಷ್ಟ್ರದ ಅಗತ್ಯವಿಲ್ಲ ಎಂದು ಅವರು ಪುನರ್‍ಚ್ಚರಿಸಿದ್ದಾರೆ.

ಭಾರತ-ಪಾಕಿಸ್ತಾನಗಳ ನಡುವೆ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಶ್ಮೀರ ವಿವಾದವನ್ನು ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕಾ ರಾಷ್ಟ್ರಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದ ಮರುದಿನವೇ ಜೈ ಶಂಕರ್ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿವಿಧ ಸಭೆ-ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿರುವ ಸುಬ್ರಮ್ಯಣಂ ಜೈಶಂಕರ್ ಇಂದು ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪೊಪಿಯೋ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು.

ಚರ್ಚೆ ವೇಳೆ ಟ್ರಂಪ್ ಅವರ ಹೇಳಿಕೆ ಪ್ರಸ್ತಾಪವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಜೈ ಶಂಕರ್ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತ್ರ ಭಾರತ ದ್ವಿಪಕ್ಷೀಯ ಸಮಾಲೋಚನೆ ನಡೆಸಲಿದೆ ಎಂದು ಅಮೆರಿಕದ ತಮ್ಮ ಸಹವರ್ತಿ ಪೊಪಿಯೋ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಈ ಮೂಲಕ ಅಮೆರಿಕದಂತಹ ಮೂರನೇ ರಾಷ್ಟ್ರ ಅಥವಾ ಟ್ರಂಪ್ ಅವರಂಹ ಪ್ರಭಾವಿ ನಾಯಕರು ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಪ್ರಮೇಯ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾರಿದ್ದಾರೆ.

ಬ್ಯಾಂಕಾಕ್‍ನಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರ ಸಮಾವೇಶ, ಪೂರ್ವಏಷಿಯಾ ವಿದೇಶಾಂಗ ಸಚಿವರ ಆರನೇ ಶೃಂಗಸಭೆ ಸೇರಿದಂತೆ ವಿವಿಧ ಸಭೆ-ಸಮ್ಮೇಳನಗಳಲ್ಲಿ ಜೈ ಶಂಕರ್ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಸಮಾವೇಶಗಳ ಭಾಗವಾಗಿ ವಿವಿಧ ದೇಶಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ-ಬಲವರ್ಧನೆ ಕುರಿತು ಗಹನ ಚರ್ಚೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ