ನವದೆಹಲಿ, ಆ.2- ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್.ಸಿ.ಎ.ಖಲ್ಫವುಲ್ಲಾ ನೇತೃತ್ವದ ಮಧ್ಯಸ್ಥಿಕೆ ಸಂಧಾನ ಸಮಿತಿಯ ಪ್ರಕ್ರಿಯೆ ಮತ್ತು ವರದಿಯಲ್ಲಿನ ಅಭಿಪ್ರಾಯ ತೃಪ್ತಿಯಾಗಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಇಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಆ. 6ರಿಂದ ಪ್ರತಿನಿತ್ಯ ಅಯೋಧ್ಯ ವಿವಾದ ಕುರಿತು ವಿಚಾರಣೆ ನಡೆಸುವುದಾಗಿ ಸುಪ್ರಿಂ ಕೋರ್ಟ್ ಇಂದು ತಿಳಿಸಿದೆ.
ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಈ ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮಧ್ಯೆಸ್ಥಿಕೆ ಸಂಧಾನ ಮೂಲಕ ಪರ್ಯಾಯ ಮಾರ್ಗೋಪಾಯಗಳ ಆಶಾಭಾವನೆ ಹೊಂದಿದ್ದ ಸುಪ್ರಿಂ ಕೋರ್ಟ್ಗೆ ಈ ಸಮಿತಿಯ ಅಭಿಪ್ರಾಯ ನಿರೀಕ್ಷಿತ ಮಟ್ಟದಲ್ಲಿ ಸಮಾಧಾನ ಮೂಡಿಸಿಲ್ಲ. ಇದರಿಂದಾಗಿ ಈ ವಿವಾದ ಮತ್ತೆ ನ್ಯಾಯಾಲಯದ ಕಟಕಟೆಯಲ್ಲೇ ಮುಂದುವರೆಯಲಿದೆ.
ಸಂಧಾನ ಸಮಿತಿ ನಿನ್ನೆಯಷ್ಟೆ ಸುಪ್ರೀಂ ಕೋರ್ಟ್ಗೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿನ ಸಾರಾಂಶಗಳನ್ನು ಪರಾಮರ್ಶಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚನ್ಯಾಯಾಧೀಶರ ಸಂವಿಧಾನ ಪೀಠ ಇಂದು ತನ್ನ ನಿರ್ಣಯವನ್ನು ಪ್ರಕಟಿಸಿದೆ.
ಸಂಧಾನ ಸಮಿತಿಯ ವರದಿ ಮತ್ತು ಅಭಿಪ್ರಾಯ ತೃಪ್ತಿಯಾಗದಿದ್ದರೆ, ನ್ಯಾಯಾಲಯದಲ್ಲೇ ವಿಚಾರಣೆ ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಸುಮಾರು ಎರಡು ತಿಂಗಳು ಕಾಲ ಸಮಿತಿ ಈ ವಿವಾದಕ್ಕೆ ಸಂಬಂಧಪಟ್ಟವರೆಲ್ಲರ ಅಭಿಪ್ರಾಯ ಸಲಹೆಗಳನ್ನು ದಾಖಲಿಸಿ ಮಧ್ಯಂತರ ವರದಿಯೊಂದಿಗೆ ತನ್ನ ಅಭಿಪ್ರಾಯವನ್ನು ಸಹ ಮಂಡಿಸಿತ್ತು.
ಈಗ ಅಯೋಧ್ಯ ವಿವಾದ ಸಂಧಾನ ಸಮಿತಿಯಿಂದಲೂ ಸೌಹಾರ್ಧಯುತವಾಗಿ ಬಗೆಹರಿಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಾನೂನಿನ ಮೂಲಕ ವಿವಾದಕ್ಕೆ ಪರಿಹಾರದ ನ್ಯಾಯ ನಿರ್ಣಯ ನೀಡಲು ನಿರ್ಧರಿಸಿದೆ.
ಆ. 6ರಿಂದ ನಡೆಯುವ ಅಯೋಧ್ಯ ವಿಚಾರಣೆಯ ಪ್ರಕ್ರಿಯೆ ಕುತೂಹಲ ಕೆರಳಿಸಿದೆ.