ದೇಶದಲ್ಲಿ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ-ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬೆಂಗಳೂರು, ಆ.3- ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ದಾಳಿ ಮಾಡುವ ಮೂಲಕ ಅಭ್ಯರ್ಥಿಗಳನ್ನು ಹೆದರಿಸಲಾಗುತ್ತಿದೆ. ಹಲವಾರು ಚುನಾವಣೆಗಳಲ್ಲಿ ಬಿಜೆಪಿ ತಂತ್ರಗಾರಿಕೆ ಮೂಲಕವೇ ಲಾಭ ಮಾಡಿಕೊಂಡಿದೆ ಎಂದು ದೂರಿದರು.

ಸಿಬಿಐ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಳಿಗಳು ರಾಜಕೀಯ ಪ್ರೇರಿತವಾಗಿವೆ. ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸಲು ದಾಳಿಗಳನ್ನು ನಡೆಸಲಾಗಿತ್ತು. ರಾಜಕೀಯ ಪ್ರೇರಿತ ದಾಳಿ ಎಂದು ಖುದ್ದು ಪ್ರಧಾನಿಯವರೇ ಒಪ್ಪಿಕೊಂಡಿದ್ದಾರೆ ಎಂದರು.

ರಾಜಕೀಯವಾಗಿ ಬೆದರಿಸಿ ತೆಲಗುದೇಶಂನ ನಾಲ್ವರು ರಾಜ್ಯಸಭಾ ಸದಸ್ಯರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅಮೇಥಿಯಲ್ಲಿ ಸಂಜಯ್‍ಸಿಂಗ್ ಅವರನ್ನೂ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.

ಉದ್ಯಮಿ ಸಿದ್ದಾರ್ಥ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂತು. ಸಿದ್ದಾರ್ಥ್ ಅವರು ಡೆತ್‍ನೋಟ್‍ನಲ್ಲಿ ಆದಾಯ ತೆರಿಗೆ ಆಯುಕ್ತರ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕರಾದ ಸತೀಶ್ ಸೈಲ್, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಆನಂದಸಿಂಗ್, ವಿನಯ್‍ಕುಮಾರ್ ಸೊರಕೆ, ಡಿ.ಕೆ.ಶಿವಕುಮಾರ್, ಭೀಮಣ್ಣ ನಾಯಕ್ ಅವರ ಮನೆ ಮೇಲೂ ಆದಾಯ ತೆರಿಗೆ ದಾಳಿ ಆಗಿತ್ತು.

ಎಂ.ಟಿ.ಬಿ.ನಾಗರಾಜ್, ಸಿದ್ದರಾಜು ಅವರ ಮನೆ ಮೇಲೂ ದಾಳಿ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮರಿಗೌಡ ಅವರ ಮನೆಯಲ್ಲೂ ತಪಾಸಣೆ ನಡೆದಿವೆ. ಈ ದಾಳಿಗಳ ಹಿಂದೆ ಸಂಪೂರ್ಣ ರಾಜಕೀಯ ಉದ್ದೇಶವಿದೆ ಎಂದು ಪ್ರಕಾಶ್ ರಾಥೋಡ್ ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ