ಚಿಕ್ಕಮಗಳೂರು, ಆ. 3- ಕಾಫಿ ಕಿಂಗ್ ಸಿದ್ದಾರ್ಥ್ ಅವರ ನಿಗೂಢ ಸಾವಿನ ಸಮಗ್ರ ತನಿಖೆಯನ್ನು ಆದಷ್ಟು ಬೇಗ ಮುಗಿಸಿ ವರದಿ ಸಲ್ಲಿಸಲು ನಾಲ್ಕು ತಂಡಗಳನ್ನು ಈಗಾಗಲೇ ರಚಿಸಿದ್ದು ಶೀಘ್ರ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದಾರೆ.
ಕಳೆದ ತಿಂಗಳ 29ರಂದು ನೇತ್ರಾವತಿ ನದಿ ಸೇತುವೆ ಬಳಿ ನಿಗೂಢವಾಗಿ ಕಣ್ಮರೆಯಾಗಿ 36ಗಂಟೆಗಳ ನಂತರ ಶವವಾಗಿ ಸಿದ್ದಾರ್ಥ ಪತ್ತೆಯಾಗಿದ್ದರು.
ಈ ಕುರಿತಂತೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದ ದೂರು ದಾಖಲಾಗಿತ್ತು. ಅವರ ಕಾರು ಚಾಲಕ ಬಸವರಾಜು ದೂರು ನೀಡಿದ್ದರು. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಕೊಲೆ ಇರಬೇಕೆಂದು ಸಂಶಯ ವ್ಯಕ್ತವಾಗಿ ನಾನಾ ರೀತಿಯಲ್ಲಿ ಚರ್ಚೆ ಆರಂಭಗೊಂಡಿವೆ.
ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗಾಗಿ 4 ತಂಡಗಳನ್ನು ರಚಿಸಿ ಬೆಂಗಳೂರು-ಚಿಕ್ಕಮಗಳೂರಿಗೆ ಒಂದೊಂದು ತಂಡ ತೆರಳಿ ಸಿದ್ದಾರ್ಥ್ ಕುಟುಂಬ ವರ್ಗ ಹಾಗೂ ಆಪ್ತರು, ಸಂಬಂಧಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿವೆ.
ಚಿಕ್ಕಮಗಳೂರಿನ ಎಬಿಸಿ ಕಾಫಿ ಕ್ಯೂರಿಂಗ್, ಕಾಫಿ ಡೇ ಶಾಪ್, ಅಂಬರ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್, ಸರಾಯ್ ಇಂಟರ್ ನ್ಯಾಷನಲ್ ಹೊಟೇಲ್, ಮೂಡಿಗೆರೆ ತಾಲೂಕಿನ ಅವರ ತೋಟದ ಮನೆಗೆ ತೆರಳಿ ನಿನ್ನೆಯಿಂದಲೇ ಮಾಹಿತಿ ಕಲೆ ಸಂಗ್ರಹಿಸಲಾಗುತ್ತಿದೆ.
ಅಲ್ಲದೆ ಇನ್ನೆರೆಡು ತಂಡಗಳು ಅವರ ಮೊಬೈಲ್ ಕರೆ ಸೇರಿದಂತೆ ಇನ್ನಿತರ ತಾಂತ್ರಿಕ ವಿಚಾರಗಳ ತನಿಖೆ ಕೈಗೊಂಡಿದೆ.
ಸಿದ್ದಾರ್ಥ್ ಬರೆದಿದ್ದಾರೆ ಎನ್ನಲಾಗಿರುವ ಐಟಿ ಅಧಿಕಾರಗಳ ವಿರುದ್ಧದ ಆರೋಪ ಪತ್ರ ಸಹ ತನಿಖೆಗೆ ಒಳಗಾಗಿದೆ.ಈ ಪತ್ರ ವಶಪಡಿಸಿಕೊಂಡಿರುವ ತನಿಖಾ ತಂಡ ಪತ್ರದ ಅಸಲೀತನದ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಐಟಿ ಅಧಿಕಾರಿಗಳು ತೊಂದರೆ ನೀಡಿದ್ದರು ಎಂದು ದೂರಿರುವ ಆ ಹಿನ್ನೆಲೆಯಲ್ಲಿ ಯಾವುದೇ ಐಟಿ ಅಧಿಕಾರಿಗಳಿಗೆ ಈ ವರೆಗೂ ನೋಟಿಸ್ ನೀಡಿಲ್ಲ ಸಿದ್ದಾರ್ಥ್ ಅವರ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಪ್ರಮುಖ ಸಲಹೆಗಾರರು ವಿದೇಶದಲ್ಲಿದ್ದು ಇ-ಮೇಲ್ ಮೂಲಕ ವಿವರಗಳನ್ನು ಅವರಿಗೆ ವಾನಿಸಲಾಗಿದ್ದು ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಬರಲು ತಿಳಿಸಲಾಗಿದೆ.
ಅಲ್ಲದೆ ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿರುವ ಹಣಕಾಸು ಸಲಹೆಗಾರರ ವಿಚಾರಣೆ ಪ್ರಕ್ರಿಯೆ ಇಂದು ನಡೆದಿದ್ದು, ಮಂಗಳೂರಿನಲ್ಲಿ ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾವ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಂಟ್ವಾಳದ ಹೆಮ್ಮರ ತೊಟ್ಲು ಬೊಲ್ ಗೇಟ್ನಿಂದ ಪಂಪ್ ಹೌಸ್ಗೆ ಬಂದು ಎಲ್ಲಿಗೆ ಹೋದರು, ನೇರವಾಗಿ ನೇತ್ರಾವತಿ ಸೇತುವೆ ಬಳಿ ಹೋದರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆಯಲ್ಲಿ ಪ್ರಶ್ನಿಸಲಾಗಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು ಅದರ ಅಂತಿಮ ವರದಿ ಇನ್ನೂ ಬಂದಿಲ್ಲ. ಎಲ್ಲವನ್ನೂ ಕ್ರೋಢಿಕರಿಸಿ ತನಿಖೆಯ ಅಂತಿಮ ಘಟ್ಟ ತಲುಪಬೇಕಾಗಿದೆ. ಇನ್ನೆರಡು ದಿನದಲ್ಲೇ ವರದಿ ನೀಡುವುದಾಗಿ ಎಸಿಪಿ ಕೋದಂಡರಾಮ್ ತಿಳಿಸಿದ್ದಾರೆ.
ಕಳೆದ ಆರು ದಿನಗಳ ಹಿಂದೆ ಮೃತಪಟ್ಟ ತಮ್ಮ ಒಡೆಯ ಸಿದ್ದಾರ್ಥ್ ಅವರ ಅಗಲಿಕೆಯ ನೋವಿನಿಂದ ಸಿಬ್ಬಂದಿ ಇನ್ನು ಹೊರ ಬಂದಿಲ್ಲ.
ಸಿದ್ದಾರ್ಥ್ ಅವರ ತೋಟದ ಮನೆಯಲ್ಲಿ ವಿಧಿವಿಧಾನಗಳನ್ನು ಅವರ ಕುಟುಂಬ ವರ್ಗ ನೆರವೇರಿಸಿದರು. ಸ್ಥಳೀಯ ಕಾಫಿ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಸಿದ್ದಾರ್ಥ್ ಅವರ ಸಾವು ಸಂಶಯಾಸ್ಪದವಾಗಿದ್ದು,ಈ ಕುರಿತು ಕೂಲಂಕುಷ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಿದ್ದಾರ್ಥ್ ಸಾವಿನ ತನಿಖೆ ದಾರಿ ತಪ್ಪುತ್ತಿರುವಂತೆ ಕಂಡು ಬರುತ್ತಿರುವುದು ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ಮೇಲೆ ಇನ್ನಷ್ಟು ಅನುಮಾನ ಹೆಚ್ಚಿಸಿವೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಮೇಲೆ ನೇರ ಆರೋಪ ಮಾಡಿರುವುದರಿಂದ ಕೇಂದ್ರ ಸರ್ಕಾರವು ನೇರ ಹೊಣೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕೇಂದ್ರದ ಕೆಲವು ಅವೈಜ್ಞಾನಿಕ ನೀತಿಗಳು ಅನೇಕ ಉದ್ಯಮಗಳ ಮೇಲೆ ಪರಿಣಾಮ ಬೀರಿವೆ. ಉದಾಹರಣೆಗೆ ನೋಟು ಅಮಾನೀಕರಣ, ಸಣ್ಣ-ದೊಡ್ಡ ಉದ್ದಿಮೆಗಳು, ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿತ್ತು.
ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವ ಆದಾಯ ತೆರಿಗೆ ಇಲಾಖೆ ದಬ್ಬಾಳಿಕೆ ಅನೇಕ ಉದ್ದಿಮೆದಾರರನ್ನು ಮಾನಸಿಕ ಹಿಂಸೆಗೆ ಒಳಪಡಿಸುತ್ತಿವೆ.
ಚಿಕ್ಕಮಗಳೂರಿನಲ್ಲಿ ಸಿದ್ದಾರ್ಥ್ ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಅವರ ಕಟ್ಟಿ ಬೆಳೆಸಿದ ಕಾಫಿ ಡೇ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಬೇಕು. ಅದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂಬಿತ್ಯಾದಿ ಮೆಸೇಜ್ಗಳನ್ನು ಹರಿ ಬಿಡುತ್ತಿದ್ದಾರೆ.