ಬೆಂಗಳೂರು, ಆ.3- ನಗರದಲ್ಲಿ ಯಾವುದೇ ರೀತಿಯ ರೌಡಿ ಚಟುವಟಿಕೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರದ ನೂತನ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇಂದು ಬೆಳಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ವಿಭಾಗಗಳಲ್ಲೂ ಸಹ ಅಧಿಕಾರಿಗಳು ರೌಡಿಗಳ ಮೇಲೆ ನಿಗಾವಹಿಸಿ ಈ ಬಗ್ಗೆ ಎಸಿಪಿಗಳಿಗೆ ಮತ್ತು ಇನ್‍ಸ್ಪೆಕ್ಟರ್‍ಗಳಿಗೆ ಸೂಚನೆ ನೀಡಬೇಕು ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮಾದಕವಸ್ತು ಜಾಲ ಹೆಚ್ಚಾಗಿದೆ. ಐಟಿ-ಬಿಟಿ ಕಂಪನಿಗಳು, ಶಾಲಾ-ಕಾಲೇಜುಗಳ ಬಳಿ ಮಾದಕವಸ್ತುಗಳ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಮಾದಕವಸ್ತು ಎಲ್ಲಿಂದ ಬರುತ್ತಿದೆ, ಯಾರು ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಅವರುಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಘಟನೆಗಳು ಸಂಭವಿಸಿದಾಗ ಇನ್‍ಸ್ಪೆಕ್ಟರ್‍ಗಳು, ಎಸಿಪಿಗಳು ಹಾಗೂ ಡಿಸಿಪಿಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಥಳಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು.
ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಬಾರದು, ಪ್ರತಿಯೊಂದು ಪ್ರಕರಣಗಳನ್ನೂ ಸಹ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ನೂತನ ಆಯುಕ್ತರು ಆದೇಶಿಸಿದರು.
ಠಾಣೆ ಹಾಗೂ ಅಧಿಕಾರಿಗಳ ಕಚೇರಿಗೆ ಬರುವ ಸಾರ್ವಜನಿಕರಿಗೆ ಸ್ಪಂದಿಸಬೇಕು, ಅವರ ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು, ವಿನಾಕಾರಣ ಸಾರ್ವಜನಿಕರನ್ನು ಠಾಣೆಗಾಗಲಿ, ಕಚೇರಿಗಾಗಲಿ ಅಲೆಸಬಾರದು, ಜನರ ವಿಶ್ವಾಸವನ್ನು ಗಳಿಸಬೇಕು ಎಂದು ತಿಳಿಸಿದರು.
ಅಪರಾಧ ಪ್ರಕರಣಗಳು ಉಂಟಾಗದಂತೆ ನೋಡಿಕೊಳ್ಳಬೇಕು, ಒಂದು ವೇಳೆ ಅಪರಾಧ ಪ್ರಕರಣಗಳು ನಡೆದರೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಅವರು ಆದೇಶಿಸಿದರು.
ಎಂತಹ ಸಂದರ್ಭದಲ್ಲೇ ಆದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳು, ಜಂಟಿ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು ಉಪಸ್ಥಿತರಿದ್ದರು.