ಬೆಂಗಳೂರು, ಆ.3- ಮನುಷ್ಯ ದೇಹ ಯಂತ್ರವಿದ್ದಂತೆ. ಸರಿಯಾದ ಸಂಸ್ಕಾರದೊಂದಿಗೆ ಚಿಕಿತ್ಸೆ ನೀಡಿ ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ಹೋಮಿಯೋಪತಿ ದಿನದ ಅಂಗವಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಹೋಮಿಯೋಪತಿ ಒಂದು ನಂಬಿಕೆಯ ವಿಷಯ. ನಂಬಿಕೆ ಇಟ್ಟು ಚಿಕಿತ್ಸೆ ಪಡೆದರೆ ಎಲ್ಲಾ ಕಾಯಿಲೆಗಳಿಗೂ ದಿವ್ಯೌಷಧವಾಗಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ಜೀವನ ಶೈಲಿಯಲ್ಲಿ ರೋಗಗಳನ್ನು ನಾವಾಗಿಯೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಬುದ್ದಿ, ಮನಸ್ಸು ಮತ್ತು ಇಂದ್ರಿಯಗಳ ಶುದ್ಧೀಕರಣದ ಮೂಲಕ ಅನಾರೋಗ್ಯವನ್ನು ತಡೆಗಟ್ಟಬಹುದು. ಆದರೆ, ಆಕರ್ಷಣೆಯಿಂದಾಗಿ ರೋಗಗಳನ್ನು ತಂದುಕೊಳ್ಳುತ್ತಿದ್ದೇವೆ. ನಾಲಿಗೆ ಚಪಲ ಹೆಚ್ಚಾಗಿದೆ. ಆಹಾರ ಪದ್ಧತಿ ಮೇಲೆ ಹಿಡಿತವಿಲ್ಲ. ಆರೋಗ್ಯ ವಿಮಾ ಸೌಲಭ್ಯ ಇರುವುದರಿಂದ ಬಹಳಷ್ಟು ಮಂದಿ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಆರೋಗ್ಯ ಶೈಲಿಯಿಂದಾಗಿಯೇ ಸಹಜವಾಗಿ ಅತಿಯಾದ ಕಾಯಿಲೆಗಳು ಆವರಿಸುತ್ತಿದ್ದು, ಔಷಧಿಗಳ ಸೇವನೆ ಕೂಡ ಹೆಚ್ಚಾಗುತ್ತಿದೆ. ಆದರೆ, ಹೋಮಿಯೋಪತಿಯಲ್ಲಿ ಅತಿಯಾದ ಔಷಧಿ ಬಳಕೆ ಇಲ್ಲ. ಅಗತ್ಯದಷ್ಟು ಚಿಕಿತ್ಸೆ ಮಾತ್ರ ದೊರೆಯುತ್ತದೆ ಎಂದು ತಿಳಿಸಿದರು.
ಕರ್ನಾಟಕ ಹೋಮಿಯೋಪತಿ ಮಂಡಳಿ ನಿರ್ದೇಶಕ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ಹೋಮಿಯೋಪತಿ ನಂಬಿಕೆಯ ವಿಷಯ. ಚಿಕಿತ್ಸೆಗೂ ಮೊದಲು ಕೌನ್ಸಿಲಿಂಗ್ ಮಾಡಿ ನಂತರ ಔಷಧಿಗಳನ್ನು ಕೊಡಲಾಗುತ್ತದೆ. ಆಲೋಪತಿಯಲ್ಲಿ ನಿರ್ದಿಷ್ಟ ಕಾಯಿಲೆಗಾಗಿ ಮಾತ್ರ ಔಷಧಿ ಕೊಟ್ಟರೆ, ಹೋಮಿಯೋಪತಿ ಒಂದು ಆರೋಗ್ಯ ಸಮಸ್ಯೆಯನ್ನು 360 ದೃಷ್ಟಿಕೋನಗಳಲ್ಲೂ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಕಾಯ್ದೆ ತಿದ್ದುಪಡಿ ತಂದು ಆರೋಗ್ಯ ಕ್ಷೇತ್ರವನ್ನು ಸೇವಾ ಕ್ಷೇತ್ರದಿಂದ ಹೊರಗಿಡುವ ಪ್ರಯತ್ನ ಮಾಡುತ್ತಿದೆ. ಆದರೆ, ಈಗಾಗಲೇ ಆರೋಗ್ಯ ಕ್ಷೇತ್ರ ಕಾರ್ಪೊರೇಟ್ ಕ್ಷೇತ್ರವಾಗಿದ್ದು, ಸೇವಾ ಕ್ಷೇತ್ರದಿಂದ ಹೊರಗಿದೆ. ಹೋಮಿಯೋಪತಿ ಚಿಕಿತ್ಸೆ ಪದ್ಧತಿ ಮಾತ್ರ ಸೇವಾ ಕ್ಷೇತ್ರವಾಗಿ ಉಳಿದುಕೊಂಡಿದೆ ಎಂದರು.
ರೋಗಿಗಳೊಂದಿಗೆ ವೈದ್ಯರು ಸ್ನೇಹಿತರಂತೆ ಮಾರ್ಗದರ್ಶಿಗಳಂತೆ ವರ್ತಿಸಬೇಕು ಎಂದು ಹೇಳಿದ ಅವರು, ಸಂಶೋಧನೆ ಎಂಬುದು ಪ್ರಕೃತಿಗೆ ವಿರುದ್ಧವಾದ ಕ್ರಮ. ಮನುಷ್ಯ ಏನೇ ಅವಿಷ್ಕಾರ ಮಾಡಿದರೂ ಅದು ಪ್ರಕೃತಿಯ ವೇಗಕ್ಕೆ ಸಮವಾಗಲಾರದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ, ಕುಲಸಚಿವರಾದ ಶಿವಾನಂದ ಕಾಪಶಿ, ಡಾ.ನಿಂಗೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.