ಕೇಂದ್ರಪಾದ/ ಭುವನೇಶ್ವರ, ಆ.3– ತನ್ನ ಮಾವನನ್ನು ಮೊಸಳೆಯಿಂದ ರಕ್ಷಿಸಿ ರಾಷ್ಟ್ರ ಶೌರ್ಯ ಪ್ರಶಸ್ತಿ ಪಡೆದ ಬಾಲಕ ಮತ್ತು ಆತನ ಸಹೋದರ ನಿನ್ನೆ ರಾತ್ರಿ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಒಡಿಶಾದ ಕೇಂದ್ರಪಾಲದಲ್ಲಿ ಸಂಭವಿಸಿದೆ.
ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ರಾಷ್ಟ್ರ ಪ್ರಶಸ್ತಿ ಪಡೆದ ಸೀತು ಮಲ್ಲಿಕ್ (16) ಮತ್ತು ಆತನ ಸಹೋದರ ಬಾಪು ಮಲ್ಲಿಕ್ ಕೇಂದ್ರಪಾದ ಜಿಲ್ಲೆಯ ರಾಜ್ನಗರ ಪ್ರದೇಶದ ಜರಿಮೂಲಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸು ನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಟ್ರಕ್, ಮಲ್ಲಿಕ್ ಸೋದರರು ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಅವರಿಬ್ಬರ ಮೇಲೆ ಹರಿಯಿತು. ಸ್ಥಳದಲ್ಲೇ ಸೀತು ಮತ್ತು ಬಾಪು ಮೃತಪಟ್ಟರು.
ಈ ಘಟನೆ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದರು.