ಭಾರತದಲ್ಲಿ ರಾಜಾಶ್ರಯ ಕೋರಿದ್ದ ಮಾಲ್ಡೀವ್ಸ್‍ನ ಮಾಜಿ ಉಪಾಧ್ಯಕ್ಷ ಗಫುರ್-ಸೂಕ್ತ ದಾಖಲೆಯಿಲ್ಲದ ಕಾರಣ ಬಂದ ನೌಕೆಯಲ್ಲೇ ವಾಪಸ್

ಟ್ಯುಟಿಕೋರಿನ್(ತ.ನಾಡು), ಆ. 3– ಅತಂತ್ರ ಪರಿಸ್ಥಿತಿಗೆ ಸಿಲುಕಿ ಭಾರತದಲ್ಲಿ ರಾಜಾಶ್ರಯ ಕೋರಿದ್ದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ನ ಮಾಜಿ ಉಪಾಧ್ಯಕ್ಷ ಅಹಮ್ಮದ್ ಅದೀಬ್ ಅಬ್ದುಲ್ ಗಫುರ್ ಅವರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ತಮಿಳನಾಡಿನ ಟ್ಯುಟಿಕೋರಿನಿಂದ ವಾಪಸ್ ಕಳುಹಿಸಿರುವ ಪ್ರಸಂಗ ನಡೆದಿದೆ.

ಮಾಲ್ಡೀವ್ಸ್‍ನಿಂದ ತಮ್ಮ 9ಅನುಚರರೊಂದಿಗೆ ಸರಕು ಸಾಗಣೆ ನೌಕೆಯಲ್ಲಿ ಗುರುವಾರ ರಾತ್ರಿ ಗಫುರ್ ಟ್ಯುಟಿಕೋರಿನ್ ಬಂದರಿಗೆ ಆಗಮಿಸಿದ್ದರು. ಆದರೆ ಇವರ ಬಳಿ ಯಾವುದೇ ಸೂಕ್ತ ದಾಖಲೆಗಳು ಇಲ್ಲದ ಕಾರಣ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಗಫುರ್ ಮತ್ತು ಅವರ ಅನುಯಾಯಿಗಳು ನೌಕೆಯಿಂದ ಕೆಳಗಿಳಿಯಲು ಅವಕಾಶ ನೀಡಲಿಲ್ಲ.

ಇದರಿಂದ ಕಂಗೆಟ್ಟ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷರು ಬಂದ ದಾರಿಗೆ ಸುಂಕವಿಲ್ಲದಂತೆ ಅದೇ ನೌಕೆಯಲ್ಲಿ ಹಿಂದಿರುಗಬೇಕಾಯಿತು. ಅವರ ಹಡಗನ್ನು ಹಿಂಬಾಲಿಸಿದ ಕರಾವಳಿ ರಕ್ಷಣಾ ಪಡೆ ನೌಕೆ ಅದು ಭಾರತೀಯ ಜಲ ಸೀಮೆಯನ್ನು ದಾಟಿ ಮುಂದೆ ಹೋಗುವುದನ್ನು ಖಚಿತ ಪಡಿಸಿಕೊಂಡು ಹಿಂದಿರುಗಿದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ