ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಹೆಚ್ಚಾಗುತ್ತಿದೆ

ಬೆಂಗಳೂರು,ಆ.2- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲು ಕಾಂಗ್ರೆಸ್‍ನ ಮೂಲ ನಿವಾಸಿಗಳು ಅಡ್ಡಗಾಲಾಗುತ್ತಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರವಾದ ಲಾಬಿ ಜೋರಾಗಿದೆ.

ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿ ಆನಂತರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಹೊಸಬರಿಗೆ ಅವಕಾಶ ಸಿಗಬೇಕು. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯನವರ ಆಪ್ತರೇ ಪಕ್ಷಕ್ಕೆ ದ್ರೋಹ ಮಾಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ.

ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಹೆಚ್ಚಾಗುತ್ತಿದೆ. ಹೀಗಾಗಿ ಕೆಲ ಕಾಲ ನಾಯಕತ್ವ ಬದಲಾವಣೆಯಾಗಬೇಕು ಎಂದು ಹಲವು ಕಾಂಗ್ರೆಸಿಗರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಿದ್ದರಾಮಯ್ಯನವರು ಈಗಾಗಲೇ ಅಘೋಷಿತವಾಗಿ ವಿಪಕ್ಷ ನಾಯಕರಾಗಿ ಕೆಲಸ ಆರಂಭಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆಯಾದರೆ ಮಾತ್ರ ಪಕ್ಷಕ್ಕೆ ಹೊಸ ಚೈತನ್ಯ ಬರಲು ಸಾಧ್ಯ ಎಂಬ ಹಳೆ ಕಾಂಗ್ರೆಸಿಗರ ವಾದದಿಂದಾಗಿ ಹೈಕಮಾಂಡ್ ಧರ್ಮಸಂಕಟಕ್ಕೆ ಸಿಲುಕಿದೆ.

ಬಹುತೇಕ ಇಂದು ವಿಪಕ್ಷ ನಾಯಕನ ಆಯ್ಕೆ ಕುರಿತು ಹೈಕಮಾಂಡ್‍ನ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇತ್ತು. ಆದರೆ ಹಳೆ ಕಾಂಗ್ರೆಸಿಗರ ಅಡ್ಡಿಯಿಂದಾಗಿ ಹೈಕಮಾಂಡ್ ತನ್ನ ಆದೇಶವನ್ನು ಹೊರಡಿಸಲು ವಿಳಂಬ ಮಾಡುತ್ತಿದೆ.

ಒಂದು ವಾರದೊಳಗಾಗಿ ಗುಲಾಂ ನಬಿ ಅಜಾದ್ ಅವರು ಬೆಂಗಳೂರಿಗೆ ಬರಲಿದ್ದು, ಎಲ್ಲ ನಾಯಕರ ಜೊತೆ ಸಮಾಲೋಚನೆ ನಡೆಸಿ ನಂತರ ವಿಪಕ್ಷ ಸ್ಥಾನಕ್ಕೆ ಯಾರಿಗೆ ಎಂಬುದನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠರಾಗಿದ್ದು, ಸಮರ್ಥ ನಾಯಕತ್ವನ್ನು ರೂಢಿಸಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಸಂದರ್ಭದಲ್ಲಿ ಕಾಂಗ್ರೆಸ್‍ನ ಇತರ ನಾಯಕರು ಡಿಕೆಶಿಗೆ ಸಾಥ್ ನೀಡಿದರೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಉದ್ದೇಶ ಪೂರ್ವಕವಾಗಿಯೇ ಕೆಲವು ನಾಯಕರ ನಿರ್ಲಕ್ಷ್ಯದಿಂದ ಸರ್ಕಾರ ಪತನವಾಗಿದೆ ಎಂಬ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿದೆ.

ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಬೇಕಾದರೆ ತತ್ವ ಸಿದ್ದಾಂತ ಆಧಾರಿತ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗಬೇಕು. ವ್ಯಕ್ತಿ ಪೂಜೆ ಮಾಡುವ ನಾಯಕರನ್ನು ದೂರ ಇಡಬೇಕು, ಕಾಂಗ್ರೆಸ್‍ನ ಸಮಸ್ತ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ನಾಯಕರಿಗೆ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಸೂಕ್ತ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದೆ.

ಗುಲಾಂ ನಬಿ ಅಜಾದ್ ಅವರು ಬೆಂಗಳೂರಿಗೆ ಬಂದ ವೇಳೆ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಲಾಬಿ ಮಾಡಲು ಒಂದಷ್ಟು ಮಂದಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಆದರೆ ಡಿ.ಕೆ.ಶಿವಕುಮಾರ್ ಅವರು ಇಂದಿನ ಪರಿಸ್ಥಿತಿಯಲ್ಲಿ ಯಾವ ರಗಳೆಗಳು ಬೇಡ, ಕಾನೂನಾತ್ಮಕ ಸಮಸ್ಯೆಗಳಿಂದ ಹೊರಬಂದ ನಂತರ ಮಿಕ್ಕ ವಿಷಯಗಳನ್ನು ಚರ್ಚೆ ಮಾಡೋಣ ಎಂದು ಹೇಳುತ್ತಿರುವುದಾಗಿ ತಿಳಿದುಬಂದಿದೆ.

ಸಿದ್ದರಾಮಯ್ಯನವರೇ ವಿರೋಧ ಪಕ್ಷದ ನಾಯಕರಾಗಲಿ ಬಹುತೇಕ ವಲಸಿಗ ನಾಯಕರು ಲಾಬಿಯನ್ನೂ ನಡೆಸುತ್ತಿದ್ದಾರೆ. ಅಂತಿಮವಾಗಿ ವಿಪಕ್ಷ ನಾಯಕ ಸ್ಥಾನ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ