ಮುಖ್ಯಮಂತ್ರಿಯವರಿಂದ ಹೈದರಾಬಾದ್‍ನ ಭದ್ರಾಚಲಂ ಸೀತಾರಾಮಚಂದ್ರ ಸ್ವಾಮಿ ದೇಗುಲದಲ್ಲಿ ಪೂಜೆ

ಬೆಂಗಳೂರು,ಆ.2- ನಾಡಿನ ಒಳಿತಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈದರಾಬಾದ್‍ನ ಭದ್ರಾಚಲಂ ಸೀತರಾಮಚಂದ್ರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜ್ಯೋತಿಷಿಯೊಬ್ಬರ ಸಲಹೆಯಂತೆ ಯಡಿಯೂರಪ್ಪ ನಿನ್ನೆ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್‍ಗೆ ತೆರಳಿದ್ದರು.

ಹೈದರಾಬಾದ್‍ನ ಶಂಶಾಬಾದ್‍ನಲ್ಲಿರುವ ಭದ್ರಾಚಲಂ ಸೀತಾರಾಮಚಂದ್ರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಎದುರಾಗಿರುವ ಬರಗಾಲ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ, ಪುತ್ರ ವಿಜಯೇಂದ್ರ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ತಡರಾತ್ರಿವರೆಗೂ ಪೂಜೆಯನ್ನು ನೆರವೇರಿಸಲಾಯಿತು ಎಂದು ತಿಳಿದುಬಂದಿದೆ.

ಅಧಿಕಾರಕ್ಕೆ ಯಾವುದೇ ಅಡ್ಡಿ, ಆತಂಕ ಎದುರಾಗದಿರಲಿ ಎಂದು ಹೋಮ-ಹವನ, ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಆಷಾಢಮಾಸದಲ್ಲಿ ಅಧಿಕಾರ ಸ್ವೀಕರಿಸಿರುವ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಹುಟ್ಟೂರಿಗೆ ತೆರಳಿ ಮನೆ ದೇವರು ಮತ್ತು ಗ್ರಾಮದೇವತೆಗೆ ಪೂಜೆ ಸಲ್ಲಿಸಿದ್ದರು. ಮೇಲುಕೋಟೆಗೂ ತೆರಳಿ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದುಕೊಂಡಿದ್ದರು. ಈಗ ಚಿನ್ನಜೀಯರ್ ಆಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಭದ್ರಾಚಲಂ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಹೈದರಾಬಾದ್ ನಲ್ಲಿ ಪ್ರಖ್ಯಾತ ಸ್ವಾಮೀಜಿ ಚಿನ್ನ ಜೀಯರ್ ಅವರನ್ನು ಮುಖ್ಯಮಂತ್ರಿಗಳು ಭೇಟಿಯಾದರು. ಯಡಿಯೂರಪ್ಪನವರು ಭೀಮನ ಅಮಾವಾಸ್ಯೆಯ ವಿಶೇಷ ಪೂಜೆಯನ್ನು ಚಿನ್ನ ಜೀಯರ್ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರವೇರಿಸಿದರು.
ಇದೇ ವೇಳೆ ಚಿನ್ನ ಜಿಯರ್ ಅವರ ಆಶ್ರಮದಲ್ಲಿ ರಾಮಾಲಯದ ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಯಡಿಯೂರಪ್ಪನವರು ಪಾಲ್ಗೊಂಡಿದ್ದರು.

ಚಿನ್ನ ಜೀಯರ್ ಸ್ವಾಮೀಜಿ ಆಂಧ್ರ ಹಾಗೂ ತೆಲಂಗಾಣದ ರಾಜಕಾರಣದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಆ ರಾಜ್ಯಗಳ ಬಹುತೇಕ ರಾಜಕಾರಣಿಗಳು ಚಿನ್ನ ಜಿಯರ್ ರವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಲವು ರಾಜಕೀಯ ಸಲಹೆಗಳನ್ನು ಚಿನ್ನ ಜೀಯರ್ ಅವರಿಂದ ಆಶೀರ್ವಾದ ಪಡೆದರು.

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮತ್ತು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ಹೈದರಾಬಾದ್ ನ ಶಂಶಾಬಾದ್‍ನಲ್ಲಿರುವ ಚಿನ್ನಜೀಯರ್ ಸ್ವಾಮೀಜಿಯ ಪರಮ ಭಕ್ತರಾಗಿದ್ದಾರೆ.

ಇದೇ ಆಶ್ರಮದಲ್ಲಿ ಕೆಸಿಆರ್ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಪೂಜೆ ನೆರವೇರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ