ಬೆಂಗಳೂರು,ಆ.2- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರ ಅನುಕೂಲಕ್ಕಾಗಿ ಜಾರಿಗೆ ತಂದ ಕರ್ನಾಟಕ ಋಣ ಪರಿಹಾರ ಕಾಯ್ದೆ 2018ಕ್ಕೆ ನಿಯಮಗಳನ್ನು ರೂಪಿಸಲಾಗುತ್ತಿದೆ.
ನೆರೆ ಹಾಗೂ ಪ್ರಾಕೃತಿಕ ವಿಪತ್ತುಗಳಿಂದ ಕಠಿಣವಾದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಣ್ಣ ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರನ್ನು ಖಾಸಗಿ ಸಾಲದ ಸುಳಿಯಿಂದ ಪಾರು ಮಾಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಕಡಿಮೆ ಇರುವವರು ಋಣಮುಕ್ತ ಕಾಯ್ದೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.
ರಾಜ್ಯ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕೃತವಾಗಿದ್ದ ಋಣ ಪರಿಹಾರಕ್ಕೆ ರಾಷ್ಟ್ರಪತಿಯವರು ಜುಲೈ 16ರಂದು ಅಂಕಿತ ಹಾಕಿದ್ದಾರೆ. ಹೀಗಾಗಿ ವಿಧೇಯಕ ಕಾಯ್ದೆಯಾಗಿದೆ.
ಋಣ ಪರಿಹಾರ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿನ್ನೆ ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲು ಸೂಚಿಸಿದ್ದಾರೆ.
ಸಹಕಾರ ಇಲಾಖೆ ನಿಯಮಗಳನ್ನು ರೂಪಿಸಿ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪಡೆದು ನಂತರ ಆದೇಶವನ್ನು ಹೊರಡಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದ ನಂತರ ಕಾಯ್ದೆಯ ಅನುಷ್ಠಾನದ ಬಗ್ಗೆ ಸ್ಪಷ್ಟ ಚಿತ್ರಣ ಗೋಚರವಾಗಲಿದೆ. ಕಾಯ್ದೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿರುವ ಗೊಂದಲಗಳಿಗೂ ತೆರೆ ಬೀಳಲಿದೆ.
ರಾಷ್ಟ್ರಪತಿಯವರ ಅಂಕಿತ ಪಡೆದಿರುವ ಋಣಮುಕ್ತ ಕಾಯ್ದೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸುವಂತೆ ಮೈತ್ರಿ ಸರ್ಕಾರ ಜು.23ರಂದು ನಿರ್ದೇಶನ ನೀಡಿತ್ತು.
ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ಗಳ ಬಳಿ ಅಡವಿಟ್ಟಿರುವ ಆಭರಣಗಳ ಚೀಟಿಯನ್ನು ಜೆರಾಕ್ಸ್ ಪ್ರತಿಯೊಂದಿಗೆ ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿ ತಮ್ಮ ವಾಸಸ್ಥಳದ ನೋಡೆಲ್ ಅಧಿಕಾರಿ(ಉಪವಿಭಾಗಾಧಿಕಾರಿ)ಗೆ ಅರ್ಜಿ ಸಲ್ಲಿಸಬೇಕು.
ಕಾಯ್ದೆ ಜಾರಿಗೊಳ್ಳುವ ಮುಂಚೆ ಪಡೆದಿರುವ ಸಾಲದ ಅಸಲು ಮತ್ತು ಬಡ್ಡಿಯನ್ನು ಸಾಲ ಪಡೆದವರು ಪಾವತಿಸಬೇಕಿಲ್ಲ. ಬದಲಾಗಿ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಋಣಮುಕ್ತ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಆದರೆ ಕಾಯ್ದೆ ಜಾರಿಯಾದ ನಂತರ ಪಡೆದಂತಹ ಯಾವುದೇ ಸಾಲ ಅನ್ವಯವಾಗುವುದಿಲ್ಲ. ಕಾಯ್ದೆ ಜಾರಿಗೆ ಬಂದ 90 ದಿನದೊಳಗಾಗಿ ಸಾಲ ಪಡೆದವರು ನೋಡೆಲ್ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು.
ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇನ್ನು ಅಧಿಕೃತ ಆದೇಶ ಹೊರಬಿದ್ದಿಲ್ಲ.ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡ ನಂತರ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಖಾಸಗಿ ಅಥವಾ ಲೇವಾದೇವಿದಾರರಿಂದ ಸಣ್ಣ ರೈತರು, ದುರ್ಬಲ ವರ್ಗದವರು ಹಾಗೂ ಭೂ ರಹಿತ ಕಾರ್ಮಿಕರು ಪಡೆದಿರುವ ಸಾಲದಿಂದ ಋಣಮುಕ್ತರಾಗಲು ಮೈತ್ರಿ ಸರ್ಕಾರ ಋಣಮುಕ್ತ ಕಾಯ್ದೆಯನ್ನು ತಂದಿದೆ.
ಉಪವಿಭಾಗಾಧಿಕಾರಿಗಳನ್ನು ಕಾಯ್ದೆಯ ಅನುಷ್ಠಾನಕ್ಕೆ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, 90 ದಿನದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಋಣಮುಕ್ತರಾಗಬಹುದು ಎಂದು ಹೇಳಿದರು.
ನಾಡಿನ ಜನರು ಈ ಕಾಯ್ದೆಯ ಸದ್ಬಳಕೆ ಮಾಡಿಕೊಂಡು ಋಣಮುಕ್ತರಾಗಬೇಕೆಂದು ಕುಮಾರಸ್ವಾಮಿ ಕರೆ ನೀಡಿದ್ದರು.